ಮುಂಬೈ: ದೇಶಿ ಪೇಟೆಯ ಸೆನ್ಸೆಕ್ಸ್ ಮತ್ತು ನಿಫ್ಟಿ ಮಂಗಳವಾರ ಎರಡನೇ ದಿನದಂದು ಕೂಡ ತಮ್ಮ ಲಾಭದ ವಹಿವಾಟು ವಿಸ್ತರಿಸಿದವು.
ಲೋಹ ಮತ್ತು ಬ್ಯಾಂಕ್ ಷೇರುಗಳಲ್ಲಿ ಅದರಲ್ಲೂ ವಿಶೇಷವಾಗಿ ಪಿಎಸ್‌ಯು ಸಾಲದಾತರಲ್ಲಿ ಬಲವಾದ ಖರೀದಿ ಆಸಕ್ತಿಯು ಪೇಟೆ ಗಳಿಕೆಗೆ ಸಹಾಯವಾಯಿತು. ಹೂಡಿಕೆದಾರರು ದೊಡ್ಡ ಕ್ಯಾಪ್ ಕಂಪನಿಗಳಿಂದ ಹಣಕಾಸಿನ ಗಳಿಕೆಗೆ ಕಾಯುತ್ತಿದ್ದರಿಂದ, ಈ ವಾರದ ಕೊನೆಯಲ್ಲಿ ಬರಬೇಕಾದ ಮಾಸಿಕ ಉತ್ಪನ್ನ ಒಪ್ಪಂದಗಳ ಅವಧಿ ಮುಗಿಯುವುದಕ್ಕೆ ಮುಂಚಿತವಾಗಿ ದಲಾಲ್ ಸ್ಟ್ರೀಟ್‌ನಲ್ಲಿ ಎಚ್ಚರಿಕೆ ವಹಿವಾಟು ಕಂಡುಬಂತು.
ದೇಶಿಯ ಷೇರು ಮಾರುಕಟ್ಟೆಗಳು ಸತತ ಎರಡನೇ ದಿನ ಲಾಭದಲ್ಲಿ ಕೊನೆಗೊಂಡವು. ಮಂಗಳವಾರ ಬೆಳಗ್ಗೆ ಲಾಭದೊಂದಿಗೆ ಪ್ರಾರಂಭವಾದ ಸೂಚ್ಯಂಕಗಳು ದಿನದ ಉದ್ದಕ್ಕೂ ಅದೇ ವೇಗ ಮುಂದುವರೆಸಿದವು. 48,424ಕ್ಕೆ ಸಕಾರಾತ್ಮಕವಾಗಿ ವಹಿವಾಟು ಆರಂಭಿಸಿದ ಸೆನ್ಸೆಕ್ಸ್ ಗರಿಷ್ಠ 49,009 ಅಂಕಗಳಿಗೆ ತಲುಪಿದೆ. ಅಂತಿಮವಾಗಿ ಮುಂಬೈ ಸಂವೇದಿ ಷೇರು ಸೂಚ್ಯಂಕ 557 ಏರಿಕೆ ಕಂಡು 48,944 ಅಂಕಗಳಲ್ಲಿ ಕೊನೆಗೊಂಡಿತು.
ರಾಷ್ಟ್ರೀಯ ಸಂವೇದಿ ಷೇರು ಸೂಚ್ಯಂಕ ನಿಫ್ಟಿ 14,493 ಅಂಕಗಳಲ್ಲಿ ಸದೃಢವಾಗಿ ಶುರುವಾಗಿ ಮಧ್ಯಂತರ ಅವಧಿಯಲ್ಲಿ 14,667-14,484 ಅಂಕಗಳ ನಡುವೆ ಸಾಗಿತು. ಅಂತಿಮವಾಗಿ, ಇದು 168 ಅಂಕ ಏರಿಕೆ ಕಂಡು 14,653 ಅಂಕಗಳಿಗೆ ತಲುಪಿದೆ. ಡಾಲರ್ ಎದುರು ರೂಪಾಯಿ ಮೌಲ್ಯ 74.89 ರೂ.ಯಷ್ಟಿದೆ. ಅಮೆರಿಕದ ಮಾರುಕಟ್ಟೆಗಳು ಸೋಮವಾರ ಭಾರಿ ಲಾಭದಲ್ಲಿ ಕೊನೆಗೊಂಡಿವೆ. ಏಷ್ಯಾದ ಮತ್ತು ಯುರೋಪಿಯನ್ ಮಾರುಕಟ್ಟೆಗಳು ಇಂದು ಮಿಶ್ರವಾಗಿ ಚಲಿಸುತ್ತಿವೆ.
ಬಹುತೇಕ ಎಲ್ಲ ಕ್ಷೇತ್ರಗಳ ಷೇರುಗಳು ಸೂಚ್ಯಂಕಗಳು ಏರಿಕೆ ಕಂಡಿವೆ. ಲೋಹ, ಟೆಲಿಕಾಂ, ಬ್ಯಾಂಕಿಂಗ್ ಮತ್ತು ಹಣಕಾಸು ಕ್ಷೇತ್ರಗಳು ನಿರ್ದಿಷ್ಟವಾಗಿ ಸೂಚ್ಯಂಕಗಳನ್ನು ಮುನ್ನಡೆಸಿದವು. ಕೊರೊನಾ ಉತ್ಕರ್ಷ, ಆರೋಗ್ಯ ವ್ಯವಸ್ಥೆಗಳ ಮೇಲಿನ ಒತ್ತಡ ಮತ್ತು ನಿರ್ಬಂಧಗಳ ಋಣಾತ್ಮಕ ಪರಿಣಾಮಗಳ ಹೊರತಾಗಿಯೂ ಸೂಚ್ಯಂಕಗಳು ಸತತ ಎರಡನೇ ದಿನವೂ ಲಾಭ ಗಳಿಸಿದವು.
ಹಿಂಡಾಲ್ಕೊ ಇಂಡಸ್ಟ್ರೀಸ್, ಟಾಟಾ ಸ್ಟೀಲ್, ಡಿವಿಸ್ ಲ್ಯಾಬ್, ಎಲ್ & ಟಿ ಮತ್ತು ಬಜಾಜ್ ಫೈನಾನ್ಸ್ ಲಾಭದ ವಹಿವಾಟು ಮುಂದುವರೆಸಿದರೆ, ಕೊಟಾಕ್ ಮಹೀಂದ್ರಾ ಬ್ಯಾಂಕ್, ಎಚ್‌ಡಿಎಫ್‌ಸಿ ಲೈಫ್ ಇನ್ಶುರೆನ್ಸ್, ಎಸ್‌ಬಿಐ ಲೈಫ್ ಇನ್ಶುರೆನ್ಸ್, ನೆಸ್ಲೆ ಇಂಡಿಯಾ ನಷ್ಟದಲ್ಲಿವೆ. ಇಂದು ಬಿಡುಗಡೆಯಾದ ಮಾರುತಿ ಸುಜುಕಿಯ ನಾಲ್ಕನೇ ತ್ರೈಮಾಸಿಕ ಫಲಿತಾಂಶಗಳು ನಿರೀಕ್ಷೆಗಳಿಗೆ ತಕ್ಕಂತೆ ಇರಲಿಲ್ಲ. 2020ಕ್ಕೆ ಹೋಲಿಸಿದರೆ ಲಾಭವು ಶೇ 9ರಷ್ಟು ಕುಸಿಯಿತು.