ನವದೆಹಲಿ: ದೇಶಿ ಮಾರುಕಟ್ಟೆಯಲ್ಲಿ ಈರುಳ್ಳಿ ಲಭ್ಯತೆ ಹೆಚ್ಚಿಸಲು ಹಾಗೂ ಬೆಲೆ ನಿಯಂತ್ರಿಸಲು ರಾಷ್ಟ್ರೀಯ ಕೃಷಿ ಸಹಕಾರಿ ಮಾರುಕಟ್ಟೆ ಒಕ್ಕೂಟ ಮುಂದಾಗಿದೆ.
ನವೆಂಬರ್ 20ರ ಒಳಗೆ 15,000 ಟನ್ ಕೆಂಪು ಈರುಳ್ಳಿ ಪೂರೈಸುವಂತೆ ನಾಫೆಡ್ ಆಮದುದಾರರಿಗೆ ಬಿಡ್ ಆಹ್ವಾನಿಸಿದೆ. ಆಮದು ಮಾಡಿದ ಈರುಳ್ಳಿಯನ್ನು ಸಕಾಲಿಕವಾಗಿ ಪೂರೈಸಬೇಕು. ಯಾವುದೇ ದೇಶದಿಂದಲಾದರೂ ಪೂರೈಕೆ ಮಾಡಿಕೊಂಡು ಪ್ರತಿ ಕೆಜಿಗೆ 50ರಿಂದ 40 ರೂ. ಬೆಲೆಯಲ್ಲಿ ಮಾರಾಟ ಮಾಡಬೇಕು ಎಂದು ಹೇಳಿದೆ.
ಆಮದು ಮಾಡಿಕೊಂಡ ಈರುಳ್ಳಿಯನ್ನು ಪ್ರಮುಖ ಬಂದರು ನಗರಗಳಲ್ಲಿ ವಿತರಿಸಲಾಗುವುದು. ಸರಕುಗಳನ್ನು ವೇಗವಾಗಿ ರವಾನಿಸಲು ಹಾಗೂ ಅವುಗಳ ಪ್ರಮಾಣವನ್ನು ಪರಿಶೀಲಿಸಲು ಎಲ್ಲಾ ರಾಜ್ಯ ಸರ್ಕಾರಗಳಿಗೆ ಸೂಚಿಸಲಾಗಿದೆ ಎಂದು ಅದು ಹೇಳಿದೆ. ಗುಣಮಟ್ಟ ಹಾಗೂ ಪೂರೈಕೆ ದಿನಾಂಕದ ಆಧಾರದ ಮೇಲೆ ಬಿಡ್ ಪರಿಗಣಿಸಲಾಗುವುದು. ಅತಿ ಹೆಚ್ಚು ವರ್ತಕರು ಬಿಡ್ನಲ್ಲಿ ಭಾಗವಹಿಸುವಂತೆ ಮಾಡಲು ಕನಿಷ್ಠ 1,000 ಟನ್ಗೆ ಬಿಡ್ ಸಲ್ಲಿಸಬಹುದು. ಈ ಹಿಂದೆ ಇದ್ದ ಕನಿಷ್ಠ ಬಿಡ್ ಪ್ರಮಾಣ 2 ಸಾವಿರ ಟನ್ ಇಳಿಕೆ ಮಾಡಲಾಗಿದೆ.
ಕಳೆದ ವರ್ಷಕ್ಕಿಂತ ಎಂಎಂಟಿಸಿ ನೇರವಾಗಿ ಟರ್ಕಿ ಮತ್ತು ಈಜಿಪ್ಟ್‌ನಿಂದ ಹಳದಿ, ಗುಲಾಬಿ ಮತ್ತು ಕೆಂಪು ಈರುಳ್ಳಿಗಳನ್ನು ಆಮದು ಮಾಡಿಕೊಂಡಿತ್ತು. ಈ ವರ್ಷ ಖಾಸಗಿ ಆಮದುದಾರರಿಗೆ ಸರಬರಾಜು ಮಾಡಲು ಅವಕಾಶ ನೀಡಲಾಗಿದೆ. ಇದರಿಂದ ಕನಿಷ್ಠ ಸಮಯದಲ್ಲಿ ಗುಣಮಟ್ಟದ ಪೂರೈಕೆ ಮಾಡಲಾಗುವುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.