ಮುಂಬೈ: ಕೋವಿಡ್ ಭಯದಿಂದಾಗಿ ಮತ್ತೆ ಷೇರುಪೇಟೆಯಲ್ಲಿ ಸೂಚ್ಯಂಕಗಳು ಮಹಾಪತನ ಕಂಡಿವೆ. ವಾರಾಂತ್ಯದ ದಿನವಾದ ಇಂದು ಆರಂಭಿಕ ವಹಿವಾಟಿನಲ್ಲೇ ಸೆನ್ಸೆಕ್ಸ್ 1,300 ಅಂಕಗಳ ಮಹಾ ಕುಸಿತದೊಂದಿಗೆ 57,430ರಲ್ಲಿ ವಹಿವಾಟು ಆರಂಭಿಸಿದೆ. ರಾಷ್ಟ್ರೀಯ ಸಂವೇದಿಕ ಸೂಚ್ಯಂಕ ನಿಫ್ಟಿ ಕೂಡ 400 ಅಂಕಗಳ ಭಾರಿ ಪತನದ ಬಳಿಕ 17 ಸಾವಿರದ 120ಕ್ಕೆ ತಲುಪಿದೆ.
ಔಷಧ ಕ್ಷೇತ್ರದ ಕಂಪನಿಗಳು ಲಾಭಗಳಿಸಿದ್ದನ್ನು ಹೊರತುಪಡಿಸಿದರೆ ಬಜಾಬ್ ಫೈನಾನ್ಸ್, ಟೈಟಾನ್, ಟಾಟಾ ಸ್ಟೀಲ್, ಬಜಾಬ್ ಫೈನ್‌ಸರ್ವ್, ಮಾರುತಿ ಸುಜುಕಿ, ಎಂ ಅಂಡ್ ಎಂ ಶೇಕಡಾ 3 ರಷ್ಟು ನಷ್ಟ ಅನುಭವಿಸಿವೆ. ಸೆನ್ಸೆಕ್ಸ್‌ನ 30 ಪ್ಯಾಕ್‌ನಲ್ಲಿ ಡಾಕ್ಟರ್ ರೆಡ್ಡೀಸ್ ಸಂಸ್ಥೆ ಉತ್ತಮ ಲಾಭದಲ್ಲಿದೆ.
ಷೇರುಪೇಟೆಯ ಮಹಾಕುಸಿತಕ್ಕೆ ಇದೇ ಕಾರಣ
ದಕ್ಷಿಣ ಆಫ್ರಿಕಾದಲ್ಲಿ ನಿನ್ನೆ ಕೋವಿಡ್ ಹೊಸ ವೈರಸ್ ಬಹಿರಂಗವಾಗಿದೆ. ಇದು ಜಗತ್ತಿನಾದ್ಯಂತ ಷೇರು ಮಾರುಕಟ್ಟೆಯಲ್ಲಿನ ಭಾರಿ ಸಂಚಲನಕ್ಕೆ ಕಾರಣವಾಗಿದ್ದು, ಹೊಸ ವೈರಸ್ ಭಯದಿಂದ ಹೂಡಿಕೆದಾರರು ತಮ್ಮ ಷೇರುಗಳನ್ನು ಭಾರಿ ಪ್ರಮಾಣದಲ್ಲಿ ಮಾರಾಟ ಮಾಡುತ್ತಿದ್ದಾರೆ. ಮಾರುಕಟ್ಟೆಯ ನಷ್ಟಕ್ಕೆ ಇದೂ ಒಂದು ಕಾರಣ.
ಸದ್ಯಕ್ಕೆ ಭಾರತದಲ್ಲಿ ಕೊರೊನಾ ಭೀತಿ ಇಲ್ಲ. ಪ್ರಕರಣಗಳು ಕನಿಷ್ಠ ಮಟ್ಟದಲ್ಲಿದ್ದರೂ ದೇಶೀಯ ಸೂಚ್ಯಂಕಗಳ ಮೇಲೆ ಜಾಗತಿಕ ಮಾರುಕಟ್ಟೆಗಳ ಪ್ರಭಾವವು ಸ್ಪಷ್ಟವಾಗಿದೆ. ಜೊತೆಗೆ ವಿದೇಶಿ ಬಂಡವಾಳ ಹೂಡಿಕೆಯ ಹೊರ ಹರಿವು ಸೆನ್ಸೆಕ್ಸ್ ಪತನಕ್ಕೆ ಕಾರಣ ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಿಸಿದ್ದಾರೆ.
ಪ್ರಸ್ತುತ ಸೆನ್ಸೆಕ್ಸ್ 1,350 ಅಂಕಗಳ ಕುಸಿತದೊಂದಿಗೆ 57,504 ಹಾಗೂ ನಿಫ್ಟಿ 405 ಅಂಕಗಳ ಪತನದೊಂದಿಗೆ 17,134ರಲ್ಲಿ ವಹಿವಾಟು ಮುಂದುವರಿಸಿದೆ.
ಇದನ್ನೂ ಓದಿ: ಯುರೋಪ್‌ನಲ್ಲಿ ಕೋವಿಡ್ ಹೆಚ್ಚಳ ತಂದ ಸಂಕಷ್ಟ; ಏಷ್ಯಾ ಷೇರುಪೇಟೆಯಲ್ಲಿ ಮಹಾಕುಸಿತ