ನವದೆಹಲಿ: ಪ್ರಾರಂಭವಾದ ಒಂದು ತಿಂಗಳಲ್ಲಿ ಥಾರ್ ಖರೀದಿ ಬುಕಿಂಗ್ 20,000 ಗಡಿ ದಾಟಿದೆ ಎಂದು ಮಹೀಂದ್ರಾ ಅಂಡ್ ಮಹೀಂದ್ರಾ ತಿಳಿಸಿದೆ.
ಗ್ರಾಹಕರ ಅಗಾಧವಾದ ಪ್ರತಿಕ್ರಿಯೆ ಗಮನಿಸಿದರೆ, ಆಯ್ದ ರೂಪಾಂತರ ಅವಲಂಬಿಸಿ ಈಗಿನ ಕಾಯುವ ಅವಧಿ 5ರಿಂದ 7 ತಿಂಗಳವರೆಗೆ ಇರುತ್ತದೆ ಎಂದು ಮಹೀಂದ್ರಾ ಅಂಡ್ ಮಹೀಂದ್ರಾ (ಎಂ&ಎಂ) ಪ್ರಕಟಣೆಯಲ್ಲಿ ಹೇಳಿದೆ.
ಕಾರು ಪ್ರಿಯರ ವ್ಯಾಪಕ ಬೇಡಿಕೆ ಗಮನದಲ್ಲಿ ಇಟ್ಟುಕೊಂಡು, ಕಂಪನಿಯು ತನ್ನ ಸೌಲಭ್ಯ ಮತ್ತು ಪೂರೈಕೆಯ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸುವ ಪ್ರಕ್ರಿಯೆಗೆ ವೇಗ ನೀಡಲಿದೆ. ಇದು ಈಗಿನ ಬೇಡಿಕೆ ಪೂರೈಸಲು ಮತ್ತು ಗ್ರಾಹಕರಿಗೆ ಕಾಯುವ ಅವಧಿ ಕಡಿಮೆ ಮಾಡಲು ಸಹಾಯಕವಾಗುತ್ತದೆ ಎಂದಿದೆ.
ಎಲ್ಲ ಹೊಸ ಥಾರ್ ಉತ್ಪನ್ನದ ಈ ಅಭೂತಪೂರ್ವ ಪ್ರತಿಕ್ರಿಯೆಯಿಂದ ನಮಗೆ ಸಂತಸವಾಗಿದೆ. ಗ್ರಾಹಕರ ಈ ಪ್ರತಿಕ್ರಿಯೆ ನಮ್ಮ ಎಲ್ಲ ನಿರೀಕ್ಷೆಗಳನ್ನು ಮತ್ತು ಉತ್ಪಾದನಾ ಸಾಮರ್ಥ್ಯವನ್ನು ಮೀರಿದೆ ಎಂಬುದನ್ನು ನಾವು ಒಪ್ಪಿಕೊಳ್ಳಬೇಕು ಎಂದು ಎಂ&ಎಂ ಆಟೋಮೋಟಿವ್ ವಿಭಾಗದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವಿಜಯ್ ನಕ್ರಾ ಹೇಳಿದರು.
ನಾವು ತಿಂಗಳಿಗೆ ಸುಮಾರು 2,000 ವಾಹನಗಳ ಸಾಮರ್ಥ್ಯದ ಯೋಜನೆ ರೂಪಿಸಿದ್ದೆವು. ಈಗ ಅದನ್ನು ಜನವರಿಯ ವೇಳೆಗೆ 3,000 ವರೆಗೆ ಹೆಚ್ಚಿಸಲು ಸಿದ್ಧರಾಗಿದ್ದೇವೆ. ಇದು ಕಾಯುವ ಅವಧಿ ಇಳಿಕೆ ಮಾಡಲಿದೆ. ಕಂಪನಿಯು ಪ್ರತಿ ಗ್ರಾಹಕರನ್ನು ಪ್ರತ್ಯೇಕವಾಗಿ ತಲುಪಲು ಮತ್ತು ಅವರ ಸಾಧ್ಯತೆ ಮತ್ತು ನಿಖರವಾದ ವಿತರಣಾ ದಿನಾಂಕದ ಬಗ್ಗ ಸಂವಹನ ನಡೆಸಲಿದೆ. ಗ್ರಾಹಕ ಸಂಪರ್ಕ ಪ್ರಕ್ರಿಯೆಯನ್ನು ಜಾರಿಗೆ ತಂದಿದ್ದು, ಇದರಿಂದಾಗಿ ಕಾಯುವ ಅವಧಿಯ ಪ್ರತಿಯೊಂದು ಹಂತದ ಮಾಹಿತಿ ಪಡೆಯಲಿದ್ದಾರೆ ಎಂದರು.
ಐಷರಾಮಿ ಸೌಲಭ್ಯಗಳನ್ನು ಹೊಂದಿರುವ ಹಾರ್ಡ್ ಟಾಪ್ ಕನ್ವರ್ಟಿಬಲ್ ಥಾರ್ಗೆ 12.49 ಲಕ್ಷ ರೂ. ಹಾಗೂ ಡೀಸೆಲ್ ಮಾದರಿಯ ಕಾರಿಗೆ 12.95 ಲಕ್ಷ ರೂ. ನಿಗದಿಯಾಗಿದೆ. ಥಾರ್ ಖರೀದಿಗೆ ಮುಂಗಡ ಬುಕ್ಕಿಂಗ್ ಶುರುವಾಗಿದೆ.
ಥಾರ್ನಲ್ಲಿ ಆರು ಸ್ಪೀಡ್ ಮ್ಯಾನುಯಲ್ ಹಾಗೂ ಆಟೊಮ್ಯಾಟಿಕ್ ಟ್ರಾನ್ಸ್ಮಿಷನ್ಸ್ನಂತಹ ಆಯ್ಕೆಗಳಿವೆ. ಬಿಎಸ್ VI ಮಾದರಿ ಎಂಜಿನ್, 2.0 ಲೀಟರ್ ಪೆಟ್ರೋಲ್ ಹಾಗೂ 2.2 ಲೀಟರ್ ಡೀಸೆಲ್ ಇಂಜಿನ್ ಸಾಮರ್ಥ್ಯವಿದೆ. ಡೀಸೆಲ್ ಚಾಲಿತ ಎಂಜಿನ್ 120 ಹೆಚ್ಪಿ ಶಕ್ತಿ ಹೊರಹೊಮ್ಮಿಸಿದ್ದರೆ, ಪೆಟ್ರೋಲ್ 150 ಹೆಚ್ಪಿ ಪವರ್ ಸಾಮರ್ಥ್ಯವಿದೆ. ನಾಲ್ಕು ಫ್ರಂಟ್ ಫೇಸಿಂಗ್ ಸೀಟ್ ಮತ್ತು 2+4 ಸೈಡ್ ಫೇಸಿಂಗ್ ಸೀಟ್ಗಳಿವೆ. ರೂಫ್ ಮೌಂಟೆಡ್ ಸ್ಪೀಕರ್ ಹಾಗೂ ಡ್ಯುಯಲ್ ಏರ್‌ಬ್ಯಾಗ್ ಹೊಂದಿದೆ.