ನವದೆಹಲಿ: ಕಳೆದ ಕೆಲವು ದಿನಗಳಿಂದ ಚಿಲ್ಲರೆ ಇಂಧನದ ಪೆಟ್ರೋಲ್ ಹಾಗೂ ಡೀಸೆಲ್ ದರ ಏರಿಕೆ ಬೆನ್ನಲ್ಲೇ ದ್ರವೀಕೃತ ಪೆಟ್ರೋಲಿಯಂ ಅನಿಲದ (ಎಲ್‌ಪಿಜಿ) ಬೆಲೆ ಹೆಚ್ಚಳವಾಗಿದ್ದು, ದೇಶಿ ಬಳಕೆಯ 14.2 ಕೆ.ಜಿ ಎಲ್‌ಪಿಜಿ ಸಿಲಿಂಡರ್‌ನ ಬೆಲೆ 50 ರೂ.ಯಷ್ಟು ಏರಿಕೆಯಾಗಿದೆ.
5 ಕೆ.ಜಿ. ಚಿಕ್ಕ ಸಿಲಿಂಡರ್‌ನ ಬೆಲೆ18 ರೂ. ಹೆಚ್ಚಳವಾಗಿದ್ದರೇ 19 ಕೆ.ಜಿ. ಸಿಲಿಂಡರ್‌ನ ಬೆಲೆ 36.50 ರೂ.ಯಷ್ಟು ಏರಿಕೆ ಕಂಡಿದೆ.
ಇಂಡಿಯನ್ ಆಯಿಲ್ ಕಾರ್ಪೊರೇಷನ್ ಪ್ರಕಾರ, ದೆಹಲಿಯಲ್ಲಿ ಸಬ್ಸಿಡಿ ರಹಿತ 14.2 ಕೆಜಿ ಗ್ಯಾಸ್ ಸಿಲಿಂಡರ್ ಈಗ 644 ರೂ.ಗೆ ಲಭ್ಯವಾಗುತ್ತಿದೆ. ಕೋಲ್ಕತ್ತಾದಲ್ಲಿ 670.50 ರೂ, ಮುಂಬೈನಲ್ಲಿ 644 ಮತ್ತು ಚೆನ್ನೈನಲ್ಲಿ 660 ರೂ. ಹೆಚ್ಚಳವಾಗಿದೆ. ಇದಕ್ಕೂ ಮುನ್ನ ದೆಹಲಿಯಲ್ಲಿ 594 ರೂ., ಕೋಲ್ಕತ್ತಾದಲ್ಲಿ 620.50 ರೂ., ಮುಂಬೈನಲ್ಲಿ 594 ಮತ್ತು ಚೆನ್ನೈನಲ್ಲಿ 610 ರೂ.ಗೆ ಮಾರಾಟ ಆಗುತ್ತಿತ್ತು.
ಸರ್ಕಾರಿ ತೈಲ ಕಂಪನಿಗಳು ನಿರ್ಧರಿಸುವ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಬೆಲೆಯನ್ನು ಮಾಸಿಕ ಆಧಾರದ ಮೇಲೆ ಪರಿಷ್ಕರಿಸಲಾಗುತ್ತದೆ. ವಾಣಿಜ್ಯ ಸಿಲಿಂಡರ್‌ನ ಬೆಲೆ 54.50 ರೂ. ಏರಿಸಲಾಗಿದೆ. ಈಗ ದೆಹಲಿಯಲ್ಲಿ ಇದರ ಬೆಲೆ 1,296 ರೂ.ಯಷ್ಟಾಗಿದೆ.
ಸಬ್ಸಿಡಿ ದರದಲ್ಲಿ ವರ್ಷಕ್ಕೆ ಗರಿಷ್ಠ 12 ಎಲ್‌ಪಿಜಿ ಸಿಲಿಂಡರ್ ಖರೀದಿಗೆ ಅವಕಾಶವಿದೆ. ಅವುಗಳನ್ನು ಖರೀದಿಸುವ ಸಮಯದಲ್ಲಿ ಪೂರ್ಣ ಬೆಲೆ ಪಾವತಿಸಿಬೇಕು. ನಂತರ ಸಬ್ಸಿಡಿಯನ್ನು ಸರ್ಕಾರವು ಗ್ರಾಹಕರ ಖಾತೆಗೆ ಜಮಾ ಮಾಡುತ್ತದೆ. ಅಂತಾರಾಷ್ಟ್ರೀಯ ಎಲ್‌ಪಿಜಿ ಬೆಲೆಗಳಲ್ಲಿನ ಏರಿಳಿತ ಮತ್ತು ವಿದೇಶಿ ವಿನಿಮಯ ದರದ ಕಾರಣ ಸಬ್ಸಿಡಿ ತಿಂಗಳಿಂದ ತಿಂಗಳಿಗೆ ಬದಲಾಗುತ್ತದೆ.