ನವದೆಹಲಿ : ಚಿನ್ನಾಭರಣಗಳಿಗೆ ಕಡ್ಡಾಯವಾಗಿ ಹಾಲ್‌ಮಾರ್ಕ್ ವಿರುದ್ಧ ಸಿಡಿದೆದ್ದಿರುವ ಚಿನ್ನದ ವ್ಯಾಪಾರಿಗಳು ಇದೇ 23ರಂದು 'ಟೋಕನ್ ಸ್ಟ್ರೈಕ್' ಎಂಬ ಪ್ರತಿಭಟನೆಗೆ ಮುಂದಾಗಿದ್ದಾರೆ. ಆಲ್ ಇಂಡಿಯಾ ಜೆಮ್ ಅಂಡ್ ಜ್ಯುವೆಲ್ಲರಿ ಡೊಮೆಸ್ಟಿಕ್ ಕೌನ್ಸಿಲ್ (ಜಿಜೆಸಿ) ಈ ಹೋರಾಟಕ್ಕೆ ಕರೆ ನೀಡಿದೆ.
ರತ್ನಗಳು ಮತ್ತು ಆಭರಣ ಉದ್ಯಮದ ಎಲ್ಲಾ ನಾಲ್ಕು ವಲಯಗಳಿಂದ 350 ಸಂಘಟನೆಗಳು ಹಾಗೂ ಒಕ್ಕೂಟಗಳು ಮುಷ್ಕರಕ್ಕೆ ಬೆಂಬಲ ನೀಡಲಿವೆ ಎಂದು ಜಿಜೆಸಿ ಹೇಳಿದೆ. ಕಡ್ಡಾಯವಾಗಿ ಚಿನ್ನದ ಮೇಲೆ ಹಾಲ್‌ಮಾರ್ಕ್ ಹಾಕುವ ಆದೇಶವನ್ನು ಸರ್ಕಾರ ಜೂನ್ 16ರಿಂದ ಹಂತ ಹಂತವಾಗಿ ಜಾರಿಗೆ ತಂದಿದೆ. ಹಂತ 1ರಲ್ಲಿ ಯೋಜನೆ ಜಾರಿಗೆ 28 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ 256 ಜಿಲ್ಲೆಗಳನ್ನು ಗುರುತಿಸಿದೆ.
ಚಿನ್ನದ ಹಾಲ್‌ಮಾರ್ಕಿಂಗ್ ಅಮೂಲ್ಯವಾದ ಲೋಹದ ಶುದ್ಧತೆಯ ಪ್ರಮಾಣೀಕರಣವಾಗಿದೆ. ಒಂದು ದಿನದ ನಮ್ಮ ಶಾಂತಿಯುತ ಪ್ರತಿಭಟನೆಯ ಹೆಚ್‌ಯುಐಡಿ (ವಿಶಿಷ್ಟ ಗುರುತು ಸಂಖ್ಯೆ) ವಿರುದ್ಧವಾಗಿದೆ. ಇದು ಅಪ್ರಾಯೋಗಿಕವಲ್ಲದ ಯೋಜನೆಯಾಗಿದೆ ಎಂದು ಜಿಜೆಸಿಯ ಮಾಜಿ ಅಧ್ಯಕ್ಷ ಅಶೋಕ್ ಮಿನಾವಾಲಾ ಹೇಳಿದ್ದಾರೆ.
ಮಿನಾವಾಲಾ ಅವರು ಆಭರಣ ವ್ಯಾಪಾರಿಗಳಿಗೆ ಸರ್ಕಾರದಿಂದ ನೇಮಕಗೊಂಡ ಸಮಿತಿಯ ಪ್ರತಿನಿಧಿ ಹಾಗೂ ದಾನಭಾಯಿ ಜ್ಯುವೆಲ್ಲರ್ಸ್ ಗ್ರೂಪ್‌ನ ನಿರ್ದೇಶಕರಾಗಿದ್ದಾರೆ. ಆಭರಣ ವ್ಯಾಪಾರಿಗಳು ಹೊಸ ಹೆಚ್‌ಯುಐಡಿಯನ್ನು ಸ್ವೀಕರಿಸಲು ಸಾಧ್ಯವಿಲ್ಲ.
ಹೊಸದಾಗಿ ನೀಡುತ್ತಿರುವ ವಿಶಿಷ್ಟ ಗುರುತಿನ ಸಂಖ್ಯೆಯಿಂದ ಚಿನ್ನದ ಶುದ್ಧತೆಯನ್ನು ಸುಧಾರಿಸುತ್ತದೆ ಎಂದು ಬಿಐಎಸ್ ಭಾವಿಸುತ್ತದೆ. ಆದರೆ, ಆಭರಣ ವ್ಯಾಪಾರಿಗಳು ಇದು ಕೇವಲ ಟ್ರ್ಯಾಕಿಂಗ್ ಕಾರ್ಯವಿಧಾನ ಎಂದು ಭಾವಿಸುತ್ತಾರೆ ಎಂದಿದ್ದಾರೆ.