ನವದೆಹಲಿ: ಕೊರೊನಾ ವೈರಸ್ ಭೀತಿಯಿಂದ ದೇಶವೇ ಲಾಕ್ಡೌನ್ಗೊಳಗಾಗಿದ್ದು ಭಾನುವಾರ ಇರುವ ಅಕ್ಷಯ ತೃತೀಯದಂದು ಭಾರತದ ಚಿನ್ನ ಮತ್ತು ಬೆಳ್ಳಿ ಮಾರುಕಟ್ಟೆಯಲ್ಲಿ ಪ್ರತಿವರ್ಷದಂತೆ ಖರೀದಿಯ ಉತ್ಸಾಹ ಕಂಡುಬರುತ್ತಿಲ್ಲ.
ಆದರೂ ಚಿನ್ನದ ವ್ಯಾಪಾರ ಸಂಸ್ಥೆಗಳು ಚಿನ್ನದ ಮಾರಾಟವನ್ನು ವಿಸ್ತಿರಿಸಲು ಡಿಜಿಟಲ್ ಮಾರ್ಗವನ್ನು ಅನುಸರಿಸುವುದಾಗಿ ತಿಳಿಸಿವೆ.
ಇದರ ಮಧ್ಯೆ ಕೇಂದ್ರ ಸರ್ಕಾರದ ಇತ್ತೀಚಿನ ಆದೇಶದಂತೆ, ಅಂಗಡಿಗಳನ್ನು ತೆರೆಯಲು ರಾಜ್ಯ ಸರ್ಕಾರಗಳು ಅನುಮತಿ ನೀಡಿದರೆ , ಚಿನಿವಾರ(ಬುಲಿಯನ್) ಮಾರುಕಟ್ಟೆಗೆ ವ್ಯಾಪಾರ ಮಾಡಲು ಅವಕಾಶ ನೀಡಬಹುದು ಎಂದು ಇಂಡಿಯನ್ ಬುಲಿಯನ್ ಮತ್ತು ಜ್ಯವೆಲರ್ಸ್ ಅಸೋಸೊಯೇಶನ್ ರಾಷ್ಟ್ರೀಯ ಕಾರ್ಯದರ್ಶಿ ಸುರೇಂದ್ರ ಮೆಹ್ತಾ ಹೇಳಿದ್ದಾರೆ.
ಕೊರೊನಾ ವೈರಸ್ ಬಿಕ್ಕಟ್ಟಿನ ನಡುವೆಯೂ ಹಳದಿ ಲೋಹದ ಬೆಲೆ ಜಾಗತಿಕ ಮಾರುಕಟ್ಟೆಯಲ್ಲಿ ಏಳುವರ್ಷಗಳಲ್ಲೆ ಗರಿಷ್ಠ ಮಟ್ಟಕ್ಕೇರಿದ್ದು, ಇದರಿಂದ ದೇಶೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೇರಿದೆ.
ಅಕ್ಷಯ ತೃತೀಯ ಶುಭ ಸಂದರ್ಭಕ್ಕಿಂತ ಮುಂಚಿತವಾಗಿ ಸರ್ಕಾರವು ಕೊರೊನಾ ಸೋಂಕಿಲ್ಲದ ವಲಯಗಳಲ್ಲಿ ಅಂಗಡಿಗಳನ್ನು ತೆರೆಯಲು ಕೆಲವು ಸಡಿಲಿಕೆಗಳನ್ನು ನೀಡಿರುವುದು ಒಳ್ಳೆಯ ಸುದ್ದಿ ಎಂದು ಮೆಹ್ತಾ ಹೇಳಿದ್ದಾರೆ.
ಏಪ್ರಿಲ್ 15 ರಂದು ಘೋಷಣೆಯಾದ ಲಾಕ್ಡೌನ್ ನಿರ್ಬಂಧಗಳನ್ನು ಸರಾಗಗೊಳಿಸುವ ಭಾಗವಾಗಿ ಕೇಂದ್ರ ಗೃಹ ಸಚಿವಾಲಯ ಶುಕ್ರವಾರ ಅಂಗಡಿಗಳನ್ನು ತೆರೆಯಲು ಅನುಮತಿ ನೀಡಿತ್ತು. ನೆರೆಹೊರೆಯ ಅಂಗಡಿಗಳು ಹಾಗೂ ನಗರದೊಳಗಿನ ಅಂಗಡಿಗಳಿಗೆ ಅವಕಾಶ ಕಲ್ಪಿಸಲಾಗಿತ್ತು. ಪುರಸಭೆಯ ಮಿತಿಯಿಂದ ಹೊರಗಡೆ ಇರುವ ಮಾಲ್ಗಳಲ್ಲಿ ಶೇಕಡಾ 50 ರಷ್ಟು ಕಾರ್ಮಿರೊಡನೆ ತೆರೆಯಬಹುದೆಂದು ಘೋಷಣೆ ಮಾಡಿತ್ತು. ಆದರೆ ಆ ಸಡಿಲಿಕೆಗಳನ್ನು ನೀಡುವುದು ರಾಜ್ಯ ಸರ್ಕಾರಗಳಿಗೆ ಸೇರಿದವಿಚಾರ ಎಂದು ಸೂಚಿಸಿತ್ತು.
ಲಾಕ್ಡೌನ್ ಇರುವುದರಿಂದ ಗ್ರಾಹಕರ ಜೊತೆ ಸಂಪರ್ಕದಲ್ಲಿದ್ದುಕೊಂಡು , ಅವರೇನಾದರು ಆನ್ಲೈನ್ನಲ್ಲಿ ಚಿನ್ನವನ್ನು ಖರೀದಿಸಿ, ಲಾಕ್ಡೌನ್ ಮುಗಿದ ಬಳಿಕ ಚಿನ್ನವನ್ನು ಸ್ವೀಕರಿಸಲು ಬಯಸಿದರೆ ಡಿಜಿಟಲ್ ಮಾರ್ಗವನ್ನು ಅನುಸರಿಸಲು ಜ್ಯುವೆಲ್ಲರಿ ಶಾಪ್ಗಳಿಗೆ ಹೇಳಿದ್ದೇವೆ ಎಂದು ಮೆಹ್ತಾ ತಿಳಿಸಿದ್ದಾರೆ.
ಸಾಮಾನ್ಯವಾಗಿ ಮದುವೆ ಸೀಸನ್ನಲ್ಲಿ ದೇಶದಲ್ಲಿ ಅಕ್ಷಯ ತೃತೀಯ ಆರಂಭವಾಗುತ್ತದೆ. ಆದರೆ ದೇಶದಲ್ಲಿ ಕೊರೊನಾ ವೈರಸ್ ಏಕಾಏಕಿ ಹರಡುತ್ತಿರುವುದರಿಂದ ಕೆಲವರು ಮದುವೆಗಳನ್ನು ಮುಂದೂಡಿದರೆ, ಕೆಲವರು ಮದುವೆಯನ್ನು ರದ್ದುಗೊಳಿಸುತ್ತಿದ್ದಾರೆ. ಆದರೂ ಈ ಸಂದರ್ಭದಲ್ಲೂ ಆನ್ಲೈನ್ ಬುಲಿಯನ್ ಮಾರುಕಟ್ಟೆಯಲ್ಲಿ ಚಿನ್ನದ ಖರೀದಿಗೆ ಗ್ರಾಹಕರಿಂದ ಉತ್ಸಾಹ ಕಂಡುಬರುತ್ತಿದೆ.