ಮುಂಬೈ: ಈಕ್ವಿಟಿ ಬೆಂಚ್ ಮಾರ್ಕ್ ಸೆನ್ಸೆಕ್ಸ್ ಕಳೆದ ನಾಲ್ಕು ವಹಿವಾಟುಗಳಲ್ಲಿ ಸತತ ಕುಸಿತ ದಾಖಲಿಸಿದ್ದರಿಂದ ಹೂಡಿಕೆದಾರರು 8 ಲಕ್ಷ ಕೋಟಿ ರೂ.ನಷ್ಟು ಸಂಪತ್ತು ಕಳೆದುಕೊಂಡಿದ್ದಾರೆ.
ಬುಧವಾರದ ವಹಿವಾಟಿನಂದು ಮುಂಬೈ ಷೇರು ಸೂಚ್ಯಂಕ ಸೆನ್ಸೆಕ್ಸ್ 937.66 ಅಂಕ ಅಥವಾ ಶೇ. 1.94ರಷ್ಟು ಕುಸಿದು 47,409.93 ಅಂಕಗಳ ಮಟ್ಟದಲ್ಲಿ ಕೊನೆಗೊಂಡಿತು. ಈ ಹಿಂದಿನ ನಾಲ್ಕು ಅವಧಿಯಲ್ಲಿ 2,382 ಅಂಕ ಅಥವಾ ಶೇ. 4.78ರಷ್ಟು ಇಳಿಕೆಯಾಯಿತು.
ರಾಷ್ಟ್ರೀಯ ಷೇರು ಸೂಚ್ಯಂಕ ನಿಫ್ಟಿ ಸಹ ಇಂದಿನ ವಹಿವಾಟಿನಲ್ಲಿ 271 ಅಂಕ ಕುಸಿದು ಜನವರಿ 4ರ ನಂತರ ಮೊದಲ ಬಾರಿಗೆ 14,000 ಅಂಕಗಳಿಂದ ಕೆಳಗಿಳಿಯಿತು. ಅಂತಿಮವಾಗಿ 13,967.5 ಅಂಕಗಳಲ್ಲಿ ಕೊನೆಗೊಂಡಿತು.
ಬಿಎಸ್ಇ ಪಟ್ಟಿ ಮಾಡಿದ ಕಂಪನಿಗಳ ಮಾರುಕಟ್ಟೆ ಬಂಡವಾಳದ ಮೌಲ್ಯದಲ್ಲಿ ಕಳೆದ ನಾಲ್ಕು ದಿನಗಳ ಪೇಟೆಯ ವಹಿವಾಟಿನಲ್ಲಿ 8,07,025.09 ರೂ. ಕರಗಿ 1,89,63,547.48 ರೂ.ಗೆ ತಲುಪಿದೆ. ಕಳೆದ ಮೂರು ವಹಿವಾಟಿನಲ್ಲಿ ಮಾರುಕಟ್ಟೆ ಅನಿಶ್ಚಿತತೆ ಕಂಡು ಬಂದಿದ್ದು, ಮುಂಬರಲಿರುವ ಕೇಂದ್ರ ಬಜೆಟ್ ವೇಳೆ ಲಾಭವನ್ನು ಕಾಯ್ದಿರಿಸಿಕೊಳ್ಳುವ ದೃಷ್ಟಿಯಿಂದ ಹೂಡಿಕೆದಾರರು ಎಚ್ಚರಿಕೆಯ ನಡೆ ಅನುಸರಿಸುತ್ತಿದ್ದಾರೆ.
ಗಳಿಕೆಗಳು ನಿರೀಕ್ಷೆಗಿಂತ ಉತ್ತಮವಾಗಿ ಹೊರಬರುತ್ತಿವೆ. ಆದರೆ ಕೆಲವು ಕಂಪನಿಗಳನ್ನು ಹೊರತುಪಡಿಸಿ ಇದುವರೆಗೆ ಫಲಿತಾಂಶಗಳನ್ನು ಘೋಷಿಸಿದ ಹೆಚ್ಚಿನ ಕಂಪನಿಗಳಲ್ಲಿ ಲಾಭದ ಬುಕ್ಕಿಂಗ್ ಕಂಡುಬರುತ್ತದೆ ಎಂದು ಕೊಟಕ್ ಸೆಕ್ಯುರಿಟೀಸ್‌ನ ಕಾರ್ಯನಿರ್ವಾಹಕ ಉಪಾಧ್ಯಕ್ಷ ರುಸ್ಮಿಕ್ ಓಜಾ ಹೇಳಿದ್ದಾರೆ.
ಇದನ್ನೂ ಓದಿ: ಜಾಗತಿಕ ಐಟಿ ಸೇವೆಯ ವೇಗದ ಬೆಳವಣಿಗೆಯ ಬ್ರಾಂಡ್ಗಳಲ್ಲಿ ಕನ್ನಡ ನೆಲದ ಇನ್ಫಿಗೆ 5ನೇ ಸ್ಥಾನ!
ಟಾಟಾ ಮೋಟಾರ್ಸ್, ಆಕ್ಸಿಸ್ ಬ್ಯಾಂಕ್, ಟಾಟಾ ಸ್ಟೀಲ್, ಗೇಲ್, ಟೈಟಾನ್, ಇಂಡಸ್ಇಂಡ್ ಬ್ಯಾಂಕ್, ಎಚ್‌ಡಿಎಫ್‌ಸಿ ಬ್ಯಾಂಕ್, ಡಾ. ರೆಡ್ಡಿಸ್, ಎಂ&ಎಂ ದಿನದ ಟಾಪ್ ಲೂಸರ್ಗಳಾದರೆ, ಟೆಕ್ ಮಹೀಂದ್ರಾ, ಎಸ್‌ಬಿಐ ಲೈಫ್ ಇನ್ಶುರೆನ್ಸ್, ವಿಪ್ರೋ, ಐಟಿಸಿ, ಮತ್ತು ಪವರ್ ಗ್ರಿಡ್ ಕಾರ್ಪ್ ಷೇರುಗಳ ದರ ಏರಿಕೆಯಾದವು.
ಬ್ರಾಡ್ ಮಾರುಕಟ್ಟೆಯಲ್ಲಿ ಸ್ಮಾಲ್ ಕ್ಯಾಪ್ ಮತ್ತು ಮಿಡ್ ಕ್ಯಾಪ್ ಸೂಚ್ಯಂಕಗಳು ಶೇ. 1.38ಕ್ಕೆ ಇಳಿದವು. ಬ್ಯಾಂಕಿಂಗ್ ಷೇರುಗಳು ಶೇ. 2.93ರಷ್ಟು ಕುಸಿದರೆ, ನಂತರದ ಸ್ಥಾನಗಳಲ್ಲಿ ಹಣಕಾಸು ಶೇ. 2.72ರಷ್ಟು, ಲೋಹ ಶೇ. 2.54ರಷ್ಟು, ರಿಯಲ್ಟಿ ಶೇ. 2.28ರಷ್ಟು ಮತ್ತು ಆಟೋ ಶೇ. 2.11ರಷ್ಟ ಕುಸಿತ ಕಂಡಿವೆ.