ವಾಷಿಂಗ್ಟನ್( ಅಮೆರಿಕ): ರಿಯಾಯಿತಿ ದರದಲ್ಲಿ ಕಚ್ಚಾ ತೈಲ ನೀಡುವ ರಷ್ಯಾ ಪ್ರಸ್ತಾಪವನ್ನು ಭಾರತ ಕೈಗೆತ್ತಿಕೊಂಡಿರುವುದು ಅಮೆರಿಕದ ನಿರ್ಬಂಧಗಳ ಉಲ್ಲಂಘನೆಯಾಗುವುದಿಲ್ಲ ಎಂದು ವೈಟ್‌ಹೌಸ್ ಸ್ಪಷ್ಟಪಡಿಸಿದೆ.
ಈ ಬಗ್ಗೆ ಮಾಹಿತಿ ನೀಡಿರುವ ವೈಟ್‌ಹೌಸ್‌ನ ಪತ್ರಿಕಾ ಕಾರ್ಯದರ್ಶಿ ಜೆನ್ ಪ್ಸಾಕಿ, ಉಕ್ರೇನ್ ಮೇಲಿನ ರಷ್ಯಾದ ಆಕ್ರಮಣವನ್ನು ಭಾರತ ಬೆಂಬಲಿಸಲಿಲ್ಲ. ಮಾತುಕತೆಯ ಮೂಲಕ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಳ್ಳುವಂತೆ ಎಲ್ಲ ಮಧ್ಯಸ್ಥಗಾರರನ್ನು ನಿರಂತರವಾಗಿ ಕೇಳಿಕೊಂಡಿದೆ. ಆದರೂ ರಷ್ಯಾ ವಿರುದ್ಧದ ಎಲ್ಲ ವಿಶ್ವಸಂಸ್ಥೆಯ ನಿರ್ಣಯಗಳಲ್ಲಿ ಅದು ದೂರವಿತ್ತು ಎಂದು ಅವರು ಹೇಳಿದ್ದಾರೆ.
ರಿಯಾಯಿತಿ ದರದಲ್ಲಿ ಕಚ್ಚಾ ತೈಲ ರಫ್ತು ಮಾಡುವ ರಷ್ಯಾದ ಪ್ರಸ್ತಾಪವನ್ನು ಭಾರತ ಪರಿಗಣಿಸುವ ಸಾಧ್ಯತೆಯ ಕುರಿತ ವರದಿಯ ಪ್ರಶ್ನೆಗೆ ಪ್ಸಾಕಿ, ಇದು ನಿರ್ಬಂಧಗಳನ್ನು ಉಲ್ಲಂಘಿಸುತ್ತದೆ ಎಂಬುದನ್ನು ನಾನು ನಂಬುವುದಿಲ್ಲ ಎಂದಿದ್ದಾರೆ. ಆದರೆ, ಈ ಸಮಯದಲ್ಲಿ ಇತಿಹಾಸದ ಪುಸ್ತಕಗಳನ್ನು ಬರೆಯುವಾಗ ನೀವು ಎಲ್ಲಿ ನಿಲ್ಲಬೇಕೆಂದು ಯೋಚಿಸಿ. ರಷ್ಯಾದ ನಾಯಕತ್ವಕ್ಕೆ ಬೆಂಬಲವು ಆಕ್ರಮಣಕ್ಕೆ ಬೆಂಬಲವಾಗಿದೆ. ಅದು ನಿಸ್ಸಂಶಯವಾಗಿ ವಿನಾಶಕಾರಿ ಪರಿಣಾಮವನ್ನು ಬೀರುತ್ತದೆ ಎಂದಿದ್ದಾರೆ.
ರಷ್ಯಾದ ತೈಲವನ್ನು ರಿಯಾಯಿತಿ ದರದಲ್ಲಿ ಖರೀದಿಸಲು ಚಿಂತನೆಯ ವರದಿಗಳ ಬಗ್ಗೆ ಭಾರತೀಯ - ಅಮೆರಿಕನ್ ಕಾಂಗ್ರೆಸ್ ಸದಸ್ಯ ಡಾ ಅಮಿ ಬೆರಾ ನಿರಾಶೆ ವ್ಯಕ್ತಪಡಿಸಿದ್ದಾರೆ. ವರದಿಗಳು ನಿಖರವಾಗಿದ್ದರೆ ಮತ್ತು ರಿಯಾಯಿತಿ ದರದಲ್ಲಿ ರಷ್ಯಾದ ತೈಲವನ್ನು ಖರೀದಿಸಲು ಭಾರತವು ನಿರ್ಧಾರವನ್ನು ತೆಗೆದುಕೊಂಡರೆ ಉಕ್ರೇನಿಯನ್ ಜನರಿಗೆ ಬೆಂಬಲವಾಗಿ ವಿಶ್ವದಾದ್ಯಂತ ದೇಶಗಳು ಒಗ್ಗೂಡಿಸಲ್ಪಟ್ಟಾಗ ಇತಿಹಾಸದ ಪ್ರಮುಖ ಕ್ಷಣದಲ್ಲಿ ವ್ಲಾಡಿಮಿರ್ ಪುಟಿನ್ ಪರವಾಗಿ ಭಾರತ ಆಯ್ಕೆ ಮಾಡಿದಂತಾಗುತ್ತದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಉಕ್ರೇನ್ನ ಕೀವ್ನತ್ತ ಹೊರಟ ಯೂರೋಪಿನ ಮೂರು ದೇಶಗಳ ಪ್ರಧಾನಿಗಳು