ಸ್ಟಾಕ್‌ಹೋಮ್: ಉಕ್ರೇನ್ ಮೇಲೆ ಕಳೆದ 8 ದಿನಗಳಿಂದ ಯುದ್ಧ ಮಾಡುತ್ತಿರುವ ಬಲಾಢ್ಯ ರಷ್ಯಾಗೆ ಈಗಾಗಲೇ ಯುರೋಪ್ ಒಕ್ಕೂಟ ಸೇರಿದಂತೆ ಹಲವು ರಾಷ್ಟ್ರಗಳು ಆರ್ಥಿಕ, ರಾಜತಾಂತ್ರಿಕ ಹಾಗು ಸಾಂಸ್ಕೃತಿಕ ನಿರ್ಬಂಧಗಳನ್ನು ಹೇರಿವೆ. ಇದರ ಜೊತೆಗೆ ರಷ್ಯಾ ಮತ್ತು ಬೆಲಾರಸ್ ಅನ್ನು ಕ್ರೀಡೆಯಿಂದಲೂ ದೂರ ಇಟ್ಟಿವೆ. ಇದೀಗ ಈ ಪಟ್ಟಿಗೆ ಸ್ವೀಡನ್ ಕೂಡ ಸೇರಿಕೊಂಡಿದೆ.
ಸ್ವೀಡನ್‌ನ ಪೀಠೋಪಕರಣ ತಯಾರಕ ದೈತ್ಯ ಸಂಸ್ಥೆ ಐಕಿಯಾ ರಷ್ಯಾ ಮೇಲೆ ವ್ಯಾಪಾರ ನಿರ್ಬಂಧ ವಿಧಿಸಿದೆ. ರಷ್ಯಾ, ಬೆಲಾರಸ್‌ನಲ್ಲಿ ತನ್ನೆಲ್ಲಾ ಚಟುವಟಿಕೆಗಳನ್ನು ಸ್ಥಗಿತಗೊಳಿಸುವುದಾಗಿ ಹೇಳಿದೆ. ಇದರಿಂದ ಈ ಎರಡೂ ದೇಶಗಳಲ್ಲಿನ ಸುಮಾರು 15,000 ಉದ್ಯೋಗಿಗಳು, 17 ಮಳಿಗೆಗಳು ಹಾಗೂ ಮೂರು ಉತ್ಪಾದನಾ ಘಟಕಗಳ ಮೇಲೆ ನೇರ ಪರಿಣಾಮ ಉಂಟಾಗಲಿದೆ.
ಉಕ್ರೇನ್‌ನಲ್ಲಿ ನಡೆಯುತ್ತಿರುವ ವಿನಾಶಕಾರಿ ಯುದ್ಧವು ಮಾನವನಿರ್ಮಿತ ದುರಂತವಾಗಿದೆ ಎಂದು ಐಕಿಯಾ ಹೇಳಿದೆ. ನಮ್ಮ ಈ ನಿರ್ಧಾರದಿಂದ ಸಾವಿರಾರು ಐಕಿಯಾ ಸಹೋದ್ಯೋಗಿಗಳ ಮೇಲೆ ಗಂಭೀರ ಪರಿಣಾಮ ಉಂಟಾಗುತ್ತಿದೆ. ಕಂಪನಿಯು ಉದ್ಯೋಗಿಗಳ ಆದಾಯದ ಸ್ಥಿರತೆಯನ್ನು ಭದ್ರಪಡಿಸುತ್ತದೆ. ಅವರಿಗೆ ಮತ್ತು ಅವರ ಕುಟುಂಬಗಳಿಗೆ ಬೆಂಬಲ ನೀಡುತ್ತದೆ ಎಂದು ಹೇಳಿದೆ.
ಇದನ್ನೂ ಓದಿ: ರಷ್ಯಾದ ಯಾವುದೇ ವಿಷಯವಸ್ತುಗಳನ್ನು ಪ್ರಸಾರ ಮಾಡುವುದಿಲ್ಲ : ನೆಟ್ ಫ್ಲಿಕ್ಸ್