ನವದೆಹಲಿ: ದೇಶದ ಪ್ರಮುಖ ಸಗಟು ಮಾರುಕಟ್ಟೆಗಳಲ್ಲಿ ಪೂರೈಕೆ ಸಮರ್ಪಕವಾಗಿದ್ದು, ದರ ಕಡಿಮೆ ಆಗಿದ್ದರೂ ಚಿಲ್ಲರೆ ಮಾರುಕಟ್ಟೆಗಳಲ್ಲಿ ತರಕಾರಿ ಬೆಲೆ ಏರಿಕೆ ಆಗುತ್ತಲೇ ಸಾಗಿದೆ. ಇದರಿಂದ ಗೃಹಿಣಿಯರಿಗೆ ಅಡುಗೆ ಮಾಡುವುದು ಹೇಗೆ ಎಂಬ ಚಿಂತೆ ಕಾಡುತ್ತಿದೆ.
ಕೇಂದ್ರ ಸರ್ಕಾರದ ಅಧಿಕೃತ ಅಂಕಿ ಅಂಶಗಳ ಅನ್ವಯ, ತರಕಾರಿಗಳ ಹಣದುಬ್ಬರ ದರವು ಕಳೆದ ಸೆಪ್ಟೆಂಬರ್ನಲ್ಲಿ ಶೇ 15ರಷ್ಟು ಕಂಡು ಬಂದಿದ್ದು, ಚಿಲ್ಲರೆ ಅಂಗಡಿಗಳಲ್ಲಿ ದರ ಕೂಡ ದ್ವಿಗುಣಗೊಂಡಿತ್ತು.
ಸರ್ಕಾರ ಈರುಳ್ಳಿ ರಫ್ತಿನ ಮೇಲೆ ನಿಷೇಧ ಹಾಗೂ ಟೊಮೆಟೊ ಬೆಲೆ ನಿಯಂತ್ರಣಕ್ಕೆ ಪ್ರಯತ್ನಿಸಿದ್ದರೂ ಧಾರಣೆ ಏರಿಕೆ ಮಾತ್ರ ನಿಲುತ್ತಿಲ್ಲ. ನಗರ ಪ್ರದೇಶಗಳಲ್ಲಿ ಪ್ರತಿ ಕೆ.ಜಿ. ಈರುಳ್ಳಿ ₹ 50 ಹಾಗೂ ಟೊಮೆಟೊ ₹ 70-80ರ ವರಗೆ ಹೆಚ್ಚಳವಾಗಿದೆ. ಬೆಳ್ಳುಳ್ಳಿ ಸಹ ಕೆ.ಜಿ.ಗೆ ₹ 250ರಿಂದ 300ಗೆ ಹೆಚ್ಚಳವಾಗಿದೆ.
ಎರಡು ತಿಂಗಳ ಹಿಂದೆ ಒಂದು ದಿನಕ್ಕೆ ಬೇಕಾದ ತರಕಾರಿಗಳನ್ನು 500 ರೂ.ಗೆ ಖರೀದಿಸುತ್ತಿದೆ. ಈಗ ಅಷ್ಟೇ ತರಕಾರಿ ಖರೀದಿಗೆ ಒಂದು ಸಾವಿರ ರೂ. ನೀಡುತ್ತಿದ್ದೇನೆ. ಅಡುಗೆಯ ಮನೆಯ ಬಜೆಟ್ ಗಾತ್ರ ಹಿಗ್ಗುತ್ತ ಸಾಗುತ್ತಿದೆ. ತರಕಾರಿಗಳಾದ ಸೂರೆಕಾಯಿ, ಕ್ಯಾಬೇಜ್, ಆಲೂಗಡ್ಡೆ ದರ ಸಹ ಏರಿಕೆ ಆಗಿದೆ ಎನ್ನುತ್ತಾರೆ ದೆಹಲಿಯ ಮಂಡವಲಿ ನಿವಾಸಿ ಸಾರಿಕಾ.