ನವದೆಹಲಿ: ಧನ್ತೇರಸ್ ಮತ್ತು ದೀಪಾವಳಿಯ ಶುಭ ಸಂದರ್ಭದ ಹಿನ್ನೆಲೆಯ ಹಬ್ಬದ ಖರೀದಿಯಲ್ಲಿ ಚಿನ್ನದ ಬೆಲೆ ಶುಕ್ರವಾರ 10 ಗ್ರಾಂ.ಗೆ 241 ರೂ.ಯಷ್ಟು ಏರಿಕೆಯಾಗಿ 50,425 ರೂ.ಗೆ ತಲುಪಿದೆ ಎಂದು ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್ ತಿಳಿಸಿದೆ.
ಹಿಂದಿನ ವಹಿವಾಟಿನ ಅಂತ್ಯದಲ್ಲಿ ಅಮೂಲ್ಯವಾದ ಲೋಹವು 10 ಗ್ರಾಂ.ಗೆ 50,184 ರೂ.ಯಲ್ಲಿ ಮಾರಾಟ ಆಗಿತ್ತು. ಇಂದು 241 ರೂ.ಯಷ್ಟು ಹೆಚ್ಚಳವಾಗಿದೆ.
ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್ ಪ್ರಕಾರ, ಬೆಳ್ಳಿ ಸಹ ಪ್ರತಿ ಕೆ.ಜಿ.ಗೆ 62,381 ರೂ.ಗಳಿಗೆ ಹೋಲಿಸಿದರೆ ಈ ದಿನದ 161 ರೂ. ಹೆಚ್ಚಳವಾಗಿ 62,542 ರೂ.ಗೆ ತಲುಪಿದೆ. ಚಿನ್ನ, ಬೆಳ್ಳಿ ಮತ್ತು ಇತರ ಬೆಲೆಬಾಳುವ ವಸ್ತುಗಳನ್ನು ಖರೀದಿಸಲು ಧನ್ತೇರಸ್ ಶುಭ ದಿನವಾಗಿದೆ. ಚಿನಿವಾರ ಪೇಟೆಯಲ್ಲಿ ಚಿನ್ನಾಭರಣಕ್ಕೆ ಅಲ್ಪ ಬೇಡಿಕೆ ಕಂಡುಬರುತ್ತಿದೆ.
ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನವು ಔನ್ಸ್‌ಗೆ 1,880 ಡಾಲರ್‌ಮತ್ತು ಬೆಳ್ಳಿ ಔನ್ಸ್‌ಗೆ 24.32 ಡಾಲರ್‌ಗಳಷ್ಟು ಲಾಭದೊಂದಿಗೆ ವಹಿವಾಟು ನಡೆಸುತ್ತಿದೆ.
ಕೋವಿಡ್-19 ಜಾಗತಿಕ ಪ್ರಕರಣಗಳ ಉಲ್ಬಣದಿಂದಾಗಿ ಆರ್ಥಿಕ ಪರಿಣಾಮದ ಭೀತಿಯಂತೆ ಚಿನ್ನದ ಬೆಲೆಗಳು ಸ್ಥಿರವಾಗಿ ವಹಿವಾಟು ನಡೆಸಿದವು. ಅಮೆರಿಕದ ಅನೇಕ ರಾಜ್ಯಗಳಲ್ಲಿ ಕೊರೊನಾ ವೈರಸ್ ಪ್ರಕರಣಗಳು ದ್ವಿಗುಣಗೊಂಡಿದ್ದು, ಮಾರುಕಟ್ಟೆಯಲ್ಲಿ ಸಾಕಷ್ಟು ಭೀತಿ ಉಂಟಾಗಿದೆ. ಸುರಕ್ಷಿತ ಧಾಮವಾದ ಹಳದಿ ಲೋಹದತ್ತ ಹೂಡಿಕೆದಾರರು ಮುಖಮಾಡಿದ್ದಾರೆ ಎಂದು ಮೋತಿಲಾಲ್ ಓಸ್ವಾಲ್ ಫೈನಾನ್ಷಿಯಲ್ ಸರ್ವಿಸಸ್ ಉಪಾಧ್ಯಕ್ಷ (ಸರಕು ಸಂಶೋಧನೆ) ನವನೀತ್ ದಮಾನಿ ಅಭಿಪ್ರಾಯಪಟ್ಟಿದ್ದಾರೆ.