ನವದೆಹಲಿ: ರೂಪಾಯಿ ಸವಕಳಿಯ ಹಿನ್ನೆಲೆಯಲ್ಲಿ ಆಗಸ್ಟ್ 11ರಂದು ಭಾರಿ ಅಂತರದಿಂದ ತೀವ್ರ ಕುಸಿತ ದಾಖಲಿಸಿದ ನಂತರ ಚಿನ್ನದ ಬೆಲೆ ಶುಕ್ರವಾರ 10 ಗ್ರಾಂ.ಗೆ 57,000 ರೂ.ಗೆ ಏರಿದೆ.
ರಷ್ಯಾದ ಕೊರೊನಾ ವೈರಸ್ ಲಸಿಕೆ ಘೋಷಣೆ ಮತ್ತು ಅಮೆರಿಕದ ಹೆಚ್ಚುವರಿ ಆರ್ಥಿಕ ಉತ್ತೇಜನ ಮಾತುಕತೆ ಪೂರ್ಣಗೊಂಡಿದ್ದರ ನಡುವೆಯೂ ಶೇ.5ಕ್ಕಿಂತಲು ಅಧಿಕ ಕುಸಿತ ಸಂಭವಿಸಿದೆ. ಇದರಿಂದಾಗಿ ಹೂಡಿಕೆದಾರರು ಭಾರಿ ಲಾಭವನ್ನು ಕಾಯ್ದಿರಿಸಿದ್ದಾರೆ.
ಬೆಲೆಯ ಚಂಚಲತೆಯ ಅವಧಿಯಲ್ಲಿ ಹಳದಿ ಲೋಹವು ಅಲ್ಪ ಮತ್ತು ದೀರ್ಘಾವಧಿಯಲ್ಲಿ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದು ದೊಡ್ಡ ಪ್ರಶ್ನೆಯಾಗಿದೆ. ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ಈ ವಾರ ಸಾಕಷ್ಟು ಏರಿಳಿತವಾದವು.
ಸಣ್ಣ ಪ್ರಮಾಣದ ಬದಲಾವಣೆಗಳಿದ್ದರೂ ಚಿನ್ನದ ದರ ಏರಿಕೆಯಾಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಡಾಲರ್ ಪರಿಭಾಷೆಯಲ್ಲಿ ಚಿನ್ನದ ಬೆಲೆ ಗುರಿ ಸದ್ಯಕ್ಕೆ 2,100 ಮತ್ತು ಡಿಸೆಂಬರ್ ವೇಳೆಗೆ 2,350 ಡಾಲರ್ ಆಗಬಹುದು. ಅಲ್ಪಾವಧಿಯಲ್ಲಿ ಬೆಳ್ಳಿ 30 ಡಾಲರ್, ಡಿಸೆಂಬರ್ ವೇಳೆಗೆ 33 ಡಾಲರ್ಗೆ ತಲುಪಲಿದೆ. ರೂಪಾಯಿ ಅನ್ವಯ, ದೀಪಾವಳಿಗೂ ಮೊದಲು ಚಿನ್ನವು 65,000 ರೂ. ಮತ್ತು ಬೆಳ್ಳಿ 90,000ಕ್ಕೆ ತಲುಪಬಹುದು ಎಂದು ಮಾರುಕಟ್ಟೆ ತಜ್ಞರು ಭವಿಷ್ಯ ನುಡಿದಿದ್ದಾರೆ.
ಚಿನ್ನದ ಮೇಲೆ ಹೂಡಿಕೆದಾರರು ಇನ್ನೂ ಸಕಾರಾತ್ಮಕ ಭಾವನೆ ಹೊಂದಿದ್ದಾರೆ. ಹಳದಿ ಲೋಹದ ಬೆಲೆಗಳು ಒಂದು ವರ್ಷದಲ್ಲಿ ಸುಮಾರು 62,000 ರೂ. ತಲುಪುವ ಸಾಧ್ಯತೆಯಿದೆ. ಬೆಳ್ಳಿ ಬೆಲೆಯಲ್ಲಿ 75,000 ರೂ. ಟಾರ್ಗೆಟ್ ಇರಿಸಲಾಗಿತ್ತು. ಅದು ಈಗಾಗಲೇ ಆ ಮಟ್ಟ ತಲುಪಿದೆ.
ಶುಕ್ರವಾರದ ವಹಿವಾಟಿನಂದು ರಾಷ್ಟ್ರ ರಾಜಧಾನಿಯಲ್ಲಿ 10 ಗ್ರಾಂ. ಚಿನ್ನದ ಮೇಲೆ ₹ 730 ಏರಿಕೆಯಾಗಿ ₹ 53,691ಗೆ ತಲುಪಿತ್ತು. ಕೆ.ಜಿ. ಬೆಳ್ಳಿಯ ಮೇಲೆ 1,520 ರೂ. ಹೆಚ್ಚಳವಾಗಿ 70,500 ರೂ.ಗೆ ಮಾರಾಟ ಆಯಿತು.