ನವದೆಹಲಿ: ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತದ ಮಧ್ಯೆ ರಾಷ್ಟ್ರ ರಾಜಧಾನಿಯಲ್ಲಿ ಬುಧವಾರ 10 ಗ್ರಾಂ. ಚಿನ್ನದ ಬೆಲೆಯು 188 ರೂ. ಹೆಚ್ಚಳವಾಗಿ 51,220 ರೂ.ಗೆ ತಲುಪಿದೆ.
ಹಿಂದಿನ ವಹಿವಾಟಿನಲ್ಲಿ ಹಳದಿ ಲೋಹವು 10 ಗ್ರಾಂ.ಗೆ 51,032 ರೂ.ಯಲ್ಲಿ ಮಾರಾಟ ಆಗುತ್ತಿತ್ತು. ಬೆಳ್ಳಿ ಸಹ ಕೆ.ಜಿ. ಮೇಲೆ 342 ರೂ. ಏರಿಕೆಯಾಗಿ 62,712 ರೂ.ಗೆ ತಲುಪಿದೆ. ಕಳೆದ ಎರಡು ದಿನಗಳಿಂದ ಇಳಿಕೆಯ ಹಾದಿಯಲ್ಲಿದ್ದ ಚಿನ್ನದ ದರವು ಏರುಗತಿಯಲ್ಲಿ ಸಾಗುತ್ತಿದೆ.
ದೆಹಲಿಯಲ್ಲಿ 24 ಕ್ಯಾರೆಟ್ ಗುಣಮಟ್ಟದ ಚಿನ್ನದ ಬೆಲೆ 188 ರೂ. ಏರಿಕೆಯಾಗಿದೆ ಎಂದು ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್ ಹಿರಿಯ ವಿಶ್ಲೇಷಕ (ಸರಕು) ತಪನ್ ಪಟೇಲ್ ಹೇಳಿದರು.
ದೇಶೀಯ ಈಕ್ವಿಟಿ ಮಾರುಕಟ್ಟೆಯಲ್ಲಿ ಭಾರಿ ಮಾರಾಟ ಮತ್ತು ಅಮೆರಿಕನ್ ಕರೆನ್ಸಿ ಮೌಲ್ಯ ವೃದ್ಧಿಯಿಂದಾಗಿ ರೂಪಾಯಿ ಮೌಲ್ಯ 16 ಪೈಸೆ ಕುಸಿದಿದ್ದು, ಪ್ರತಿ ಡಾಲರ್ ವಿರುದ್ಧ 73.87 ರೂ.ಗೆ ಇಳಿದಿದೆ.