ನವದೆಹಲಿ: ಸರ್ವ ಋತುಗಳಲ್ಲಿ ವಸಂತ ಋತು ಶ್ರೇಷ್ಠವಾದಂತೆ ಎಲ್ಲ ಹಬ್ಬಗಳಲ್ಲಿ ಯುಗಾದಿಯೇ ಶ್ರೇಷ್ಠ ಅನ್ನೋದನ್ನು ಜನ ಒಪ್ಪಿಕೊಂಡಿದ್ದಾರೆ. ಆದರೆ, ಈ ಬಾರಿಯ ಯುಗಾದಿಗೆ ಕೊರೊನಾ ವೈರಸ್ ಛಾಯೆ ಗಾಢವಾಗಿ ಕಾಡಲಿದೆ.
ಹಿಂದೂ ಧರ್ಮದಲ್ಲಿ ಯುಗಾದಿ ಹಬ್ಬ ಚ್ಯೆತ್ರ ಮಾಸದ ಶುಕ್ಲ ಪಕ್ಷದ ಪಾಢ್ಯದಂದು ಬರುತ್ತದೆ. ಹಿಂದೂಗಳಿಗೆ ಇದೊಂದು ಪವಿತ್ರ ದಿನ. ಯುಗಾದಿ ಎಂದರೇ 'ಯುಗದ ಆದಿ'. ಸಂಸ್ಕೃತದ 'ಯುಗ' ಮತ್ತು 'ಆದಿ' ಎಂಬ ಎರಡು ಶಬ್ಧಗಳಿಂದ ಕೂಡಿದೆ. ಯುಗವೆಂದರೆ ಹೊಸ ವರ್ಷ ಅಥವಾ ಆದಿಯ ಆರಂಭವೆಂದರ್ಥ.
ಹಬ್ಬದ ದಿನಗಳಲ್ಲಿ ಬಂಗಾರ ಖರೀದಿಸಿದರೆ ಶುಭವಾಗುವುದೆಂಬ ನಂಬಿಕೆ ಭಾರತೀಯರಲ್ಲಿ ತಲೆ ಮಾರುಗಳಿಂದ ಗಟ್ಟಿಯಾಗಿ ಬೇರೂರಿದೆ. ಆದ್ರೆ, ಕಳೆದ ಕೆಲವು ವಾರಗಳಿಂದ ಕೋವಿಡ್- 19 ಅಟ್ಟಹಾಸಕ್ಕೆ ಬಹುತೇಕ ಆರ್ಥಿಕತೆ ಮಂಕಾಗಿದೆ. ಅನೇಕ ಉದ್ಯಮಿಗಳು ವಹಿವಾಟು ಇಲ್ಲದೆ ಸೊರಗಿವೆ. ಸ್ವಯಂಘೋಷಿತ ಲಾಕ್ಡೌನ್ನಿಂದಾಗಿ ಎಲ್ಲ ಮಾರುಕಟ್ಟೆಗಳು ಬಂದ್ ಆಗಿವೆ. ಚಿನಿವಾರ ಪೇಟೆ ಸ್ಥಗಿತವಾಗಿ, ಜ್ಯುವಲ್ಲರಿ ಮಳಿಗೆಗಳತ್ತ ಆಭಾರಣ ಪ್ರಿಯರು ಮುಖ ಮಾಡುತ್ತಿಲ್ಲ.
ಎಂಸಿಎಕ್ಸ್ನ ಏಪ್ರಿಲ್ ಫ್ಯೂಚರ್ ಚಿನ್ನದ ಪ್ರತಿ 10 ಗ್ರಾಂ. ಮೇಲೆ ಶೇ 1.2ರಷ್ಟು ಅಥವಾ ₹ 480 ಇಳಿಕೆಯಾಗಿ ₹ 39,037ಕ್ಕೆ ಮಾರಾಟ ಆಗುತ್ತಿದೆ. ಕಳೆದ ಆರು ದಿನಗಳಲ್ಲಿ ಚಿನ್ನದ ದರದಲ್ಲಿ ₹ 5,000 ಯಷ್ಟು ಇಳಿಕೆಯಾಗಿದೆ. ₹ 44,500ರಲ್ಲಿ ಮಾರಾಟ ಆಗುತ್ತಿದ್ದ ಚಿನ್ನ ಈಗ 40 ಸಾವಿರದ ಒಳಗೆ ಬಂದಿದೆ. ಆದರೂ ಗ್ರಾಹಕರು ಚಿನ್ನ ಖರೀದಿಸಲು ಆಸಕ್ತಿ ತೋರುತ್ತಿಲ್ಲ. ಹೀಗಾಗಿ, ವ್ಯಾಪಾರಿಗಳು ಮುಂಬರಲಿರುವ ಯುಗಾದಿಗಾದರೂ ಚಿನ್ನ ಪ್ರಿಯರು ಅಂಗಡಿಗಳಿಗೆ ಬರಬಹುದು ಎಂಬ ನಿರೀಕ್ಷೆ ಇಟ್ಟುಕೊಂಡಿದ್ದಾರೆ.
ಖಾಲಿ ಮಾರುಕಟ್ಟೆಗಳು ಆಭರಣ ಮಳಿಗೆಗಳ ಹೊಳಪನ್ನು ಕಿತ್ತುಕೊಂಡಿವೆ. ಚಿನ್ನಾಭರಣಗಳ ಮಾರಾಟ ಗಮನಾರ್ಹವಾಗಿ ಇಳಿಕೆಯಾಗಿದೆ. ಈ ಮಳಿಗೆಗಳಲ್ಲಿ ಯಾವುದೇ ಗ್ರಾಹಕರ ಹೆಜ್ಜೆಯ ಸದ್ದುಗಳಿಲ್ಲ. ಚಿಲ್ಲರೆ ವ್ಯಾಪಾರಿಗಳು ದೇಶಾದ್ಯಂತ ಶೇ. 20-25ರಷ್ಟು ವ್ಯಾಪಾರವನ್ನು ಮಾತ್ರ ಮಾಡುತ್ತಿದ್ದಾರೆ ಎಂದು ಅಖಿಲ ಭಾರತ ರತ್ನ ಮತ್ತು ಆಭರಣ ದೇಶಿಯ ಮಂಡಳಿ ಅಧ್ಯಕ್ಷ ಅನಂತ ಪದ್ಮನಾಭನ್ ಪಿಟಿಐಗೆ ತಿಳಿಸಿದ್ದಾರೆ.