ನವದೆಹಲಿ: ದೇಶಿ ಆಟೋಮೊಬೈಲ್ ಉದ್ಯಮದ ಮಾರಾಟ ಬೆಳವಣಿಗೆ ದರದ ಕುಸಿತ ಮುಂದುವರಿದಿದೆ. ಪ್ರಮುಖ ವಾಹನ ತಯಾರಿಕಾ ಕಂಪನಿಗಳ ಸೆಪ್ಟಂಬರ್ ತಿಂಗಳ ಮಾರಾಟದ ದತ್ತಾಂಶಗಳನ್ನು ಬಿಡುಗಡೆ ಮಾಡಿದ್ದು, ಶೇ. 55ರಷ್ಟು ಬೆಳವಣಿಗೆ ದರ ಕುಸಿತ ಕಂಡಿದೆ.
ಆಗಸ್ಟ್ ತಿಂಗಳಲ್ಲಿ ಮಾರುತಿ, ಮಹೀಂದ್ರ ಆ್ಯಂಡ್ ಮಹೀಂದ್ರ ಹಾಗೂ ಟೊಯೋಟಾ ಕಂಪನಿಗಳ ವಾಹನ ಮಾರಾಟ ಶೇ. 22- 40ರಷ್ಟು ಇಳಿಕೆ ಕಂಡುಬಂದಿತ್ತು. ಸೆಪ್ಟಂಬರ್ ತಿಂಗಳಲ್ಲಿ ಸಹ ನಕರಾತ್ಮಕ ಬೆಳವಣಿಗೆಯ ವೇಗ ಮುಂದುವರಿದಿದ್ದು, ಇವುಗಳು ಶೇ. 20- 50ರಷ್ಟು ಇಳಿಕೆ ದಾಖಲಿಸಿವೆ. ಸರಕು ವಾಹನಗಳ ತಯಾರಿಕ ದೈತ್ಯ ಅಶೋಕ್ ಲೈಲ್ಯಾಂಡ್ ಅತ್ಯಂತ ಕನಿಷ್ಠ ಮಟ್ಟದ ಮಾರಾಟವನ್ನು ಇದೇ ಮೊದಲ ಬಾರಿಗೆ (ಶೇ. 56.57ರಷ್ಟು) ದಾಖಲಿಸಿದೆ.
ಭಾರತೀಯ ವಾಹನ ತಯಾರಿಕಾ ಕಂಪನಿಗಳ ಒಕ್ಕೂಟ (ಎಸ್ಐಎಎಂ) ಅನ್ವಯ, ಕಾರು ಮಾರಾಟವು ಎಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಕಳೆದ ಎರಡು ದಶಕಗಳ ಕನಿಷ್ಠ ಮಟ್ಟಕ್ಕೆ ಇಳಿದಿದೆ ಎಂದು ತಿಳಿಸಿತ್ತು.
ಪ್ರಯಾಣಿಕ ವಾಹನಗಳ ವಿಭಾಗದಲ್ಲಿ ಮಾರುತಿ ಸುಜುಕಿ ಇಂಡಿಯಾ (ಎಂಎಸ್ಐ) ಶೇ. 24.4ರಷ್ಟು, ಮಹೀಂದ್ರ ಆ್ಯಂಡ್ ಮಹೀಂದ್ರ ಶೇ. 21ರಷ್ಟು ಹಾಗೂ ಟೊಯೋಟಾ ಕಿರ್ಲೋಸ್ಕರ್ ಶೇ. 16ರಷ್ಟು ಕುಸಿತ ದಾಖಲಿಸಿದೆ.
ದ್ವಿಚಕ್ರ ವಾಹನೋದ್ಯಮದ ಬಜಾಜ್ ಆಟೋ ಶೇ. 22ರಷ್ಟು ಹಾಗೂ ಟಿವಿಎಸ್ ಶೇ. 25ರಷ್ಟು ಇಳಿಕೆಯು ಸೆಪ್ಟಂಬರ್ ಅವಧಿಯಲ್ಲಿ ಸಂಭವಿಸಿದೆ. ವಾಣಿಜ್ಯ ವಾಹನ ವಿಭಾಗದಲ್ಲೂ ಕುಸಿತ ಸಾಮಾನ್ಯವಾಗಿದ್ದು, ಟಾಟಾ ಮೋಟಾರ್ಸ್ನ ಕಮರ್ಷಿಯಲ್ ವಾಹನ ಮಾರಾಟವು ಶೇ. 47ರಷ್ಟು ಇಳಿಕೆ ಕಂಡಿದೆ.