ನವದೆಹಲಿ : ಕೋವಿಡ್ ಹರಡುವಿಕೆ ಪ್ರಾರಂಭವಾದ ಬಳಿಕ ಗಮನಾರ್ಹ ಅಭಿವೃದ್ದಿ ಕಂಡಿರುವ ಆನ್ಲೈನ್ ಮೆಡಿಸಿನ್ ಕ್ಷೇತ್ರಕ್ಕೆ ಇ-ಕಾಮರ್ಸ್ ದೈತ್ಯ ಅಮೆಜಾನ್ ಲಗ್ಗೆಯಿಟ್ಟಿದೆ. ಮೊದಲ ಹಂತವಾಗಿ ಬೆಂಗಳೂರು ನಗರದಲ್ಲಿ ಸೇವೆಯನ್ನು ಪ್ರಾರಂಭಿಸಲು ಅಮೆಜಾನ್ ನಿರ್ಧರಿಸಿದ್ದು, ಮುಂದಿನ ದಿನಗಳಲ್ಲಿ ದೇಶದ ಇತರ ನಗರಗಳಿಗೂ ವಿಸ್ತರಿಸಲು ತೀರ್ಮಾನಿಸಿದೆ.
ಗ್ರಾಹಕರ ಅವಶ್ಯಕತೆಗಳನ್ನು ಪೂರೈಸುವ ಸಲುವಾಗಿ ಹಾಗೂ ನಮ್ಮ ಬದ್ಧತೆಯ ಭಾಗವಾಗಿ ಬೆಂಗಳೂರಿನಲ್ಲಿ ಅಮೆಜಾನ್ ಫಾರ್ಮಸಿಯನ್ನು ಪ್ರಾರಂಭಿಸುತ್ತಿದ್ದೇವೆ. ಗ್ರಾಹಕರು ಪ್ರಿಸ್ಕ್ರಿಪ್ಷನ್ ಆಧಾರಿತ ಔಷಧಗಳನ್ನು ಆರ್ಡರ್ ಮಾಡಲು ಅವಕಾಶ ಮಾಡಿಕೊಡುತ್ತೇವೆ. ಜೊತೆಗೆ ಆರೋಗ್ಯ ಉಪಕರಣಗಳು ಮತ್ತು ಪ್ರಮಾಣೀಕೃತ ಮಾರಾಟಗಾರರಿಂದ ಆರ್ಯುವೇದಿಕ್ ಔಷಧಗಳನ್ನೂ ಕೂಡ ಪೂರೈಸುತ್ತೇವೆ. ಇದು ಕಾಲದ ಅಗತ್ಯವಾಗಿದೆ, ಯಾಕೆಂದರೆ ಗ್ರಾಹಕರು ಮನೆಯಲ್ಲಿ ಸುರಕ್ಷಿತವಾಗಿದ್ದು, ತಮ್ಮ ಅಗತ್ಯತೆಗಳನ್ನು ಪೂರೈಸಿಕೊಳ್ಳಲು ಇದು ಸಹಾಯ ಮಾಡುತ್ತದೆ ಎಂದು ಅಮೆಜಾನ್ ವಕ್ತಾರರು ತಿಳಿಸಿದ್ದಾರೆ.
ಪ್ರಿಸ್ಕ್ರಿಪ್ಷನ್ ಔಷಧಗಳನ್ನು ಆನ್ಲೈನ್ನಲ್ಲಿ ಮಾರಾಟ ಮಾಡಲು ಇ-ಫಾರ್ಮಸಿಗಳು ಕೇಂದ್ರ ಪರವಾನಗಿ ಪ್ರಾಧಿಕಾರದಲ್ಲಿ ನೋಂದಾಯಿಸಿಕೊಳ್ಳಬೇಕು. ಪರವಾನಗಿ ಹೊಂದಿರುವವರೊಂದಿಗೆ ಪಾಲುದಾರಿಕೆ ಹೊಂದಲು ಅಮೆಜಾನ್ ಇಂಡಿಯಾ ಬಯಸಿದೆ ಎಂದು ವಕ್ತಾರರು ಮಾಹಿತಿ ನೀಡಿದ್ದಾರೆ.
ಎಂ.ಜಿ ಫಾರ್ಮಸಿ ಮತ್ತು ಮೆಡ್ಲೈಫ್ನಂತ ಹೆಲ್ತ್ ಟೆಕ್ ಸ್ಟಾರ್ಟ್ ಆ್ಯಪ್ಗಳು ಕೊರೊನಾ ಹಿನ್ನೆಲೆ ಜನರು ಸಾಮಾಜಿಕ ಅಂತರ ಕಾಪಾಡಿಕೊಂಡು ಔಷಧ ಪಡೆದುಕೊಳ್ಳಲು, ಕೆಲ ತಿಂಗಳ ಹಿಂದೆ ಆನ್ಲೈನ್ ಮೆಡಿಸಿನ್ ಸೇವೆಯನ್ನು ಪ್ರಾರಂಭಿಸಿ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿತ್ತು.