ನವದೆಹಲಿ: ಭಾರೀ ಆರ್ಥಿಕ ಮತ್ತು ಉದ್ಯೋಗ ನಷ್ಟದ ಭೀತಿಯಲ್ಲಿದ್ದ ಭಾರತೀಯ ಆಲ್ಕೊಹಾಲಿಕ್ನ ಪಾನೀಯ ಉದ್ಯಮ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಒಂದು ಯೋಜನೆಯನ್ನು ರೂಪಿಸಿ ಡಿಸ್ಟಿಲರಿ ಹಾಗೂ ಬಾಟ್ಲಿಂಗ್ ಪ್ಲಾಂಟ್ಗಳನ್ನು ಹಂತಹಂತವಾಗಿ ತೆರೆಯಲು ಅವಕಾಶ ನೀಡುವಂತೆ ಮನವಿ ಮಾಡಿದೆ.
ಕೋವಿಡ್ -19 ಮುಕ್ತ ಪ್ರದೇಶಗಳಲ್ಲಿ ಚಿಲ್ಲರೆ ಮತ್ತು ಆನ್ಟ್ರೇಡ್ಗೆ (ಪಬ್, ರೆಸ್ಟೋರೆಂಟ್ ಇತ್ಯಾದಿ) ಹಂತ- ಹಂತವಾಗಿ ತೆರೆಯಲು ಮತ್ತು ಕಟ್ಟುನಿಟ್ಟಾಗಿ ಆನ್‌ಲೈನ್ ಮಾರಾಟ ಆರಂಭಿಸಲು ಉದ್ಯಮವು ಪ್ರಯತ್ನಿಸುತ್ತಿದೆ.
ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಅವರಿಗೆ ಬರೆದ ಪತ್ರದಲ್ಲಿ, ಭಾರತೀಯ ಮದ್ಯ ಪಾನೀಯ ಕಂಪನಿಗಳ ಒಕ್ಕೂಟವು (ಸಿಐಎಬಿಸಿ) ಕೋವಿಡ್-19 ತಡೆಗಟ್ಟುವ ಮಾರ್ಗಸೂಚಿಗಳಿಗೆ ಅನುಗುಣವಾಗಿ ಮದ್ಯ ಪಾನೀಯ ಉದ್ಯಮವನ್ನು ತುರ್ತಾಗಿ ಹಂತ- ಹಂತವಾಗಿ ತೆರೆಯಲು ಅನುಮತಿಸುವಂತೆ ಕೋರಿದೆ.
ಸಿಐಎಬಿಸಿ ಭಾರತೀಯ ಆಲ್ಕೊಹಾಲ್ಯುಕ್ತ ಪಾನೀಯ ಉದ್ಯಮದ ಅತ್ಯುನ್ನತ ಸಂಸ್ಥೆಯಾಗಿದ್ದು, ಭಾರತ ಮತ್ತು ವಿದೇಶಗಳಲ್ಲಿ ಮದ್ಯ ತಯಾರಿಸುವ ಮತ್ತು ಮಾರಾಟ ಮಾಡುವ ಪ್ರಮುಖ ಭಾರತೀಯ ಕಂಪನಿಗಳು ಸದಸ್ಯರನ್ನು ಹೊಂದಿದೆ.
ಗೋಯಲ್ ಮತ್ತು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಸಿಐಎಬಿಸಿ ಮಹಾನಿರ್ದೇಶಕ ವಿನೋದ್ ಗಿರಿ ಪತ್ರ ಬರೆದಿದ್ದಾರೆ. ಲಾಕ್ ಡೌನ್ ಆದೇಶದಿಂದಾಗಿ ಎಲ್ಲಾ ಸಗಟು ಮತ್ತು ಚಿಲ್ಲರೆ ವ್ಯಾಪಾರ ಸ್ಥಗಿತಗೊಳಿಸಲಾಗಿದೆ.
ಫ್ಯಾಕ್ಟರಿ ಗೋದಾಮುಗಳಲ್ಲಿ ಸಾಕಷ್ಟು ಸ್ಟಾಕ್ ಹೊಂದಿವೆ. ಟ್ರಕ್ಗಳು ಸಿಕ್ಕಿಹಾಕಿಕೊಂಡಿವೆ. ವಿತರಣಾ ಗೋದಾಮುಗಳನ್ನು ಸ್ಟಾಕ್ನೊಂದಿಗೆ ಲಾಕ್ ಮಾಡಲಾಗಿದೆ. ಚಿಲ್ಲರೆ ಅಂಗಡಿಗಳಲ್ಲಿ ಸಾಕಷ್ಟು ಸ್ಟಾಕ್ ಮಾರಾಟವಾಗದೆ ಉಳಿದಿದೆ. ಡಿಸ್ಟಿಲರಿ ಮತ್ತು ಬಾಟ್ಲಿಂಗ್ ಘಟಕಗಳನ್ನು ಮುಚ್ಚಲಾಗಿದೆ. ವಿವಿಧ ತೆರಿಗೆಗಳ ಮೂಲಕ ಸುಮಾರು 2 ಲಕ್ಷ ಕೋಟಿ ರೂ. ಕೊಡುಗೆ ನೀಡುವ ಉದ್ಯಮ ತನ್ನ ಜೀವನೋಪಾಯಕ್ಕೆ ಹೆಣಗಾಡುತ್ತಿದೆ. ಸುಮಾರು 40 ಲಕ್ಷ ರೈತರು, 20 ಲಕ್ಷ ಜನರಿಗೆ ನೇರ ಮತ್ತು ಪರೋಕ್ಷವಾಗಿ ಉದ್ಯೋಗ ನೀಡಿದೆ ಎಂದು ಗಿರಿ ಹೇಳಿದರು.