ನವದೆಹಲಿ: ಕೋವಿಡ್-19 ಹಿನ್ನೆಲ್ಲೆಯಲ್ಲಿ ವಿಧಿಸಲಾದ ಲಾಕ್‌ಡೌನ್ ಮತ್ತು ಸಾಮಾಜಿಕ ಅಂತರವು ಭಾರತದಲ್ಲಿನ ಕೈಗಾರಿಕೆಗಳಲ್ಲಿನ ಉದ್ಯೋಗ ನಷ್ಟ ಮಾತ್ರವಲ್ಲದೇ ಕಂಪನಿಗಳ ನೇಮಕಾತಿಗೂ ಬ್ರೇಕ್ ಹಾಕಿದೆ. ಈ ಮೂಲಕ ಕೋಟ್ಯಂತರ ಯುವ ಉದ್ಯೋಗಿಗಳ ಕನಸಿಗೆ ಬೆಂಕಿ ಇಟ್ಟಿದೆ.
ಮಾರ್ಚ್ ತಿಂಗಳಲ್ಲಿ ಭಾರತದ ವಾಯುಯಾನ, ಪ್ರಯಾಣ ಮತ್ತು ಆತಿಥ್ಯ (ಹಾಸ್ಪಿಟಲಿಟಿ) ಕೈಗಾರಿಕೆಗಳಲ್ಲದೇ ಇತರ ವಲಯಗಳಲ್ಲಿ ನೇಮಕಾತಿ ಚಟುವಟಿಕೆ ಕುಸಿತವಾಗಿದೆ. ಪ್ರಮುಖ ಕೈಗಾರಿಕೆಗಳು ಕಳೆದ ವರ್ಷಕ್ಕೆ ಹೋಲಿಸಿದರೆ ಚಿಲ್ಲರೆ ವ್ಯಾಪಾರ (ಶೇ 50), ಆಟೋ / ಆಟೋ ಸಂಬಂಧಿತ (ಶೇ 38), ಫಾರ್ಮಾ (ಶೇ 26), ವಿಮೆ (ಶೇ 11), ಲೆಕ್ಕಪತ್ರ ನಿರ್ವಹಣೆ/ ಹಣಕಾಸು (ಶೇ 10), ಐಟಿ-ಸಾಫ್ಟ್‌ವೇರ್ (ಶೇ 9) ಮತ್ತು ಬಿಎಫ್‌ಎಸ್‌ಐ (ಶೇ 9) ಇಳಿಕೆ ಆಗಿದೆ ಎಂದು ನೌಕ್ರಿ ಜಾಬ್‌ಸ್ಪೀಕ್ ಸೂಚ್ಯಂಕ ತಿಳಿಸಿದೆ.
ಭಾರತದಲ್ಲಿ ಒಟ್ಟಾರೆ ನೇಮಕಾತಿ ಚಟುವಟಿಕೆಯು ಕಳೆದ ತಿಂಗಳು ಶೇ 18ರಷ್ಟು (ವರ್ಷದಿಂದ ವರ್ಷಕ್ಕೆ) ಕುಸಿತ ದಾಖಲಿಸಿದೆ. ಹೋಟೆಲ್ / ರೆಸ್ಟೋರೆಂಟ್, ಟಿಕೆಟಿಂಗ್ / ಟ್ರಾವೆಲ್ / ಏರ್‌ಲೈನ್ಸ್ ಮತ್ತು ಮಾರ್ಕೆಟಿಂಗ್ / ಜಾಹೀರಾತು / ಎಂಆರ್ / ಪಿಆರ್ ಕ್ಷೇತ್ರಗಳಲ್ಲಿನ ವೃತ್ತಿಪರರಿಗೆ ಹೊಸ ಉದ್ಯೋಗಗಳು ಕ್ರಮವಾಗಿ ಶೇ 51, 48 ಮತ್ತು 33 ಕುಸಿದವು.
ವೃತ್ತಿಪರ ಅನುಭವಿಗಳ ನೇಮಕಾತಿ ಮೇಲು ಪರಿಣಾಮ ಬೀರುತ್ತದೆ. ಹಿರಿಯ ನಿರ್ವಹಣೆ (13-16 ವರ್ಷ ಅನುಭವ) ಶೇ 29ರಷ್ಟು, ಟೀಂ ಲೀಡರ್ (16 ವರ್ಷಅನುಭವ) ಶೇ 29 ಮತ್ತು ಮಧ್ಯಮ ನಿರ್ವಹಣಾ (8-12 ವರ್ಷ ಅನುಭವ) ಶೇ 20ರಷ್ಟು ಇಳಿಕೆಯಾಗಿದೆ.
ಮೈಕ್ರೋಸಾಫ್ಟ್ ಒಡೆತನದ ಲಿಂಕ್ಡ್‌ಇನ್‌ನ ವರದಿ ಅನ್ವಯ, ಭಾರತೀಯ ಉದ್ಯೋಗಿಗಳ ಪೈಕಿ 25 ಪ್ರತಿಶತದಷ್ಟು ಜನರು ತಮ್ಮ ಆದಾಯದಲ್ಲಿ ಇಳಿಕೆ ಕಂಡುಬಂದಿದೆ ಎಂದಿದೆ. 39 ಪ್ರತಿಶತದಷ್ಟು ಜನರು ಕೋವಿಡ್-19 ಸಾಂಕ್ರಾಮಿಕ ಪರಿಣಾಮದಿಂದಾಗಿ ವೈಯಕ್ತಿಕ ಉಳಿತಾಯದಲ್ಲಿ ಕುಸಿತ ಇಳಿಕೆ ಕಂಡುಬಂದಿದೆ.