ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ವಿಧಾನಸಭೆಯಲ್ಲಿ 2020-21ನೇ ಸಾಲಿನ ಪೂರಕ ಅಂದಾಜುಗಳ ಮೊದಲನೇ ಕಂತಿನ ಬೇಡಿಕೆಗಳನ್ನು ಮಂಡಿಸಿದರು.
ಕೋವಿಡ್-19 ಸೋಂಕು ನಿಯಂತ್ರಣ ಸಂಬಂಧ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಗೆ ಐಸಿಯು ಉಪಕರಣ, ಎನ್-95 ಮಾಸ್ಕ್, ಪಿಪಿಇ ಕಿಟ್ ಖರೀದಿಗೆ ಒಟ್ಟು 1,090.61 ಕೋಟಿ ರೂ. ಹೆಚ್ಚುವರಿಯಾಗಿ ಒದಗಿಸುವುದು ಸೇರಿದಂತೆ ಒಟ್ಟು 4,008.50 ಕೋಟಿ ರೂ. ಮೊತ್ತವನ್ನು 2020-21ನೇ ಸಾಲಿನ ಪೂರಕ ಅಂದಾಜುಗಳ ಮೊದಲನೆ ಕಂತಿನಲ್ಲಿ ಒದಗಿಸಲಾಗಿದೆ.
ಬಿ.ಎಸ್.ಯಡಿಯೂರಪ್ಪ ಮಂಡಿಸಿದ ಪೂರಕ ಅಂದಾಜುಗಳಲ್ಲಿನ ಒಟ್ಟು 4,008.50 ಕೋಟಿ ರೂ. ಪೈಕಿ 278.58 ಕೋಟಿ ರೂ. ಪ್ರಭೃತ ವೆಚ್ಚ ಮತ್ತು 3,729.92 ಕೋಟಿ ರೂ. ಪರಿಷ್ಕತ ವೆಚ್ಚ ಸೇರಿದೆ. ಸಂಚಿತ ನಿಧಿಯಿಂದ ಹೊರ ಹೋಗುವ ನಿವ್ವಳ ಮೊತ್ತ 3,971.58 ಕೋಟಿ ರೂ.ಗಳಾಗಿದೆ. ಇದರಲ್ಲಿ 497.87 ಕೋಟಿ ರೂ. ಕೇಂದ್ರ ಸಹಾಯಕ್ಕೆ ಸಂಬಂಧಪಟ್ಟಿವೆ ಎಂದು ಉಲ್ಲೇಖಿಸಲಾಗಿದೆ.
ಕೋವಿಡ್ ಸೋಂಕು ಎದುರಿಸಲು ಉಪಕರಣ, ಔಷಧಿ, ಕಿಟ್‌ಗಳು, ವೆಂಟಿಲೇಟರ್ ಖರೀದಿಗೆ ಆರೋಗ್ಯ ಇಲಾಖೆಗೆ 1,090.61 ಕೋಟಿ ರೂ., ವೈದ್ಯಕೀಯ ಶಿಕ್ಷಣ ಇಲಾಖೆ ಅಡಿಯ ವಿವಿಧ ವೈದ್ಯಕೀಯ ಸಂಸ್ಥೆಗಳಿಗೆ ಐಸಿಯು ಉಪಕರಣ, ಎನ್-95 ಮಾಸ್ಕ್, ಪಿಪಿಇ ಕಿಟ್ ಖರೀದಿಗೆ 136.16 ಕೋಟಿ ರೂ., ಬೌರಿಂಗ್ ಮತ್ತು ಲೇಡಿ ಕರ್ಜನ್ ವೈದ್ಯಕೀಯ ಶಿಕ್ಷಣ ಸಂಸ್ಥೆಯಡಿ ಬರುವ ಬ್ರಾಡ್ ವೇ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆ ನಿರ್ವಹಣೆಗೆ ತಾತ್ಕಾಲಿಕವಾಗಿ ಸೃಜಿಸಿರುವ ಹುದ್ದೆಗಳಿಗೆ ವೇತನ ಪಾವತಿಗೆ 2.38 ಕೋಟಿ ರೂ. ಹಾಗೂ ಕೋವಿಡ್ ನಿರ್ವಹಣೆಗೆ ಆರೋಗ್ಯ ಇಲಾಖೆ ಗುತ್ತಿಗೆ, ಹೊರ ಗುತ್ತಿಗೆ ವೈದ್ಯಾಧಿಕಾರಿಗಳಿಗೆ ವೇತನ ನೀಡಲು 12.90 ಕೋಟಿ ರೂ. ಒದಗಿಸಲಾಗಿದೆ.
ಲಾಕ್ಡೌನ್ ಹಿನ್ನೆಲೆಯಲ್ಲಿ ಉದ್ಯೋಗ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ ಮಡಿವಾಳ ಸಮುದಾಯ, ಕ್ಷೌರಿಕ ವೃತ್ತಿಯಲ್ಲಿ ತೊಡಗಿರುವ ಅಸಂಘಟಿತ ಸಮುದಾಯಗಳಿಗೆ ಪರಿಹಾರ ನೀಡಲು 180 ಕೋಟಿ ರೂ. ಒದಗಿಸಿರುವುದು ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಕೋವಿಡ್ ನಿರ್ವಹಣೆ ಸೇರಿದಂತೆ ಇನ್ನಿತರ ಸೌಕರ್ಯಗಳನ್ನು ಕಲ್ಪಿಸಲು ಪೂರಕ ಅಂದಾಜುಗಳಲ್ಲಿ ಹಣವನ್ನು ನೀಡಲು ಕ್ರಮ ವಹಿಸಲಾಗಿದೆ. ಲಾಕ್ಡೌನ್ ನಿಂದಾಗಿ ಸಂಕಷ್ಟಕ್ಕೊಳಗಾದ ಹಣ್ಣು ಮತ್ತು ತರಕಾಗಿ ಬೆಳಗಾರರಿಗೆ ಪರಿಹಾರ ಧನ 17.44 ಕೋಟಿ ರೂ. ಒದಗಿಸಲಾಗಿದೆ. ಅಂತಾರಾಷ್ಟ್ರೀಯ ಏರ್ ಶೋ ಸಂಬಂಧ ಬದಲಿ ರಸ್ತೆಗಳ ಅಭಿವೃದ್ಧಿಗಾಗಿ ಹೆಚ್ಚುವರಿಯಾಗಿ 14.10 ಕೋಟಿ ರೂ. ನೀಡಿಲಾಗಿದೆ.