ನವದೆಹಲಿ: ಸಗಟು ಬೆಲೆ ಸೂಚ್ಯಂಕ (ಡಬ್ಲ್ಯುಪಿಐ) ಆಧರಿಸಿದ ಹಣದುಬ್ಬರ ದರವು ಏಪ್ರಿಲ್ನಲ್ಲಿ ಅಲ್ಪ ಕುಸಿತ ಕಂಡಿದ್ದು ಶೇ 3.07ಕ್ಕೆ ಇಳಿದಿದೆ. ಆದರೆ, ಆಹಾರ ಪದಾರ್ಥಗಳ ಬೆಲೆಯ ಏರಿಕೆ ಯಥಾವತ್ತಾಗಿ ಮುಂದುವರಿದಿದೆ.
ಮಂಗಳವಾರ ಬಿಡುಗಡೆ ಮಾಡಿದ ಸಗಟು ಬೆಲೆ ಸೂಚ್ಯಂಕ (ಡಬ್ಲ್ಯುಪಿಐ) ಆಧಾರಿತ ದತ್ತಾಂಶದಲ್ಲಿ ಹಣದುಬ್ಬರ ಪ್ರಮಾಣವು ಅಲ್ಪ ಇಳಿಕೆ ಕಂಡುಬಂದಿದ್ದು, ಇಂಧನ, ತಯಾರಿಕ ಉತ್ಪನ್ನದಲ್ಲಿ ಬೆಲೆ ಇಳಿಕೆ ಆಗಿದ್ದರೇ ಆಹಾರ ಪದಾರ್ಥಗಳ ಬೆಲೆ ಏರಿಕೆಯು ಯಥಾಸ್ಥಿತಿಯಲ್ಲಿದೆ.
ಡಬ್ಲ್ಯುಪಿಐ ದರವು 2019ರ ಮಾರ್ಚ್ ತಿಂಗಳಲ್ಲಿ ಶೇ 3.18ರಷ್ಟು ಇದ್ದರೇ 2018ರ ಏಪ್ರಿಲ್ನಲ್ಲಿ 3.62ರಷ್ಟು ಇದ್ದಿತ್ತು. ಏಪ್ರಿಲ್ ತಿಂಗಳಲ್ಲಿ ತರಕಾರಿಗಳ ಬೆಲೆಯಲ್ಲಿ ಏರಿಕೆ ಕಂಡುಬಂದಿದ್ದು, ಈ ಅವಧಿಯಲ್ಲಿ ಶೇ 40.65ರಷ್ಟಾಗಿದೆ. ಈ ಹಿಂದಿನ ತಿಂಗಳು ಇದು ಶೇ 28.23ರಷ್ಟಿದ್ದು, ಶೇ 12.52ರಷ್ಟು ಏರಿಕೆ ಕಂಡಿದೆ. ಇದುವೇ ತರಕಾರಿಗಳ ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ.
ಆಹಾರ ಪದಾರ್ಥಗಳ ಹಣದುಬ್ಬರವು ಶೇ 7.37ರಷ್ಟು ಇದ್ದಿದ್ದು, ಹಿಂದಿನ ತಿಂಗಳಲ್ಲಿ ಶೇ 5.68ರಷ್ಟಿತ್ತು. ಇಂಧನ ಮತ್ತು ವಿದ್ಯುತ್ ವಿಭಾಗದ ಹಣದುಬ್ಬರವು ಶೇ 5.41ರಿಂದ ಶೇ 3.84ಗೆ ತಲುಪಿದೆ. ಮಾರ್ಚ್ನಲ್ಲಿ ಶೇ 2.16ರಷ್ಟು ಇದ್ದಿದ್ದ ತಯಾರಿಕ ಹಣದುಬ್ಬರ ಶೇ 1.72ಕ್ಕೆ ತಲುಪಿದೆ.
ಭಾರತೀಯ ರಿಸರ್ವ್ ಬ್ಯಾಂಕ್, ಕಳೆದ ತಿಂಗಳು ಚಿಲ್ಲರೆ ಹಣದುಬ್ಬರದಿಂದಾಗಿ ತನ್ನ ವಿತ್ತೀಯ ನೀತಿಯಲ್ಲಿ ಬದಲಾವಣೆ ತಂದು ಬಡ್ಡಿ ದರದಲ್ಲಿ ಶೇ 0.25 ಕಡಿತಗೊಳಿಸಿತ್ತು. ತರಕಾರಿ, ಮಾಂಸ, ಮೀನು ಮತ್ತು ಮೊಟ್ಟೆ ಸೇರಿದಂತೆ ಆಹಾರ ಪದಾರ್ಥಗಳ ಬೆಲೆ ಏರಿಕೆ ಕಂಡ ಹಿನ್ನೆಲೆಯಲ್ಲಿ ಚಿಲ್ಲರೆ ಹಣದುಬ್ಬರವು ಏಪ್ರಿಲ್ ತಿಂಗಳಿನಲ್ಲಿ ಶೇ 2.92 ರಷ್ಟು ಏರಿಕೆ ದಾಖಲಿಸಿದೆ.