ಬಜೆಟ್ ಮಹತ್ವದ್ದಾಗಿದೆ ಏಕೆಂದರೆ ಭಾರತದ ತೀವ್ರ ಆರ್ಥಿಕ ಕುಸಿತದ ಹಿನ್ನೆಲೆಯಲ್ಲಿ ಇದು ರೂಪುಗೊಳ್ಳುತ್ತಿದೆ. 2019 ರ ಜುಲೈ- ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ನಾಮಮಾತ್ರ ಜಿಡಿಪಿ ಬೆಳವಣಿಗೆ ಶೇಕಡಾ 6.1 ಕ್ಕೆ ಕುಸಿದಿದೆ. 2011- 12ರಿಂದ ಆರಂಭವಾದ ಕುಸಿತದ ಪರಂಪರೆಯಲ್ಲಿಯೇ ಇದು ಅತ್ಯಂತ ನಿಧಾನಗತಿಯ ಬೆಳವಣಿಗೆ ಆಗಿದೆ. ಈ ತಿಂಗಳ ಆರಂಭದಲ್ಲಿ ಬಿಡುಗಡೆಯಾದ ಸರ್ಕಾರದ ಅಧಿಕೃತ ಅಂದಾಜಿನ ಪ್ರಕಾರ ಈ ವರ್ಷ ಅಂದರೆ 2019-20ರಲ್ಲಿ ನಾಮಮಾತ್ರದ ಬೆಳವಣಿಗೆ ಕೇವಲ ಶೇ 7.5 ರಷ್ಟು ಇರಲಿದೆ. ಇದು ದಶಕಗಳಲ್ಲಿಯೇ ಅತ್ಯಂತ ಕನಿಷ್ಠ ಪ್ರಮಾಣದ್ದು.
ಭಾರತೀಯ ರಿಸರ್ವ್ ಬ್ಯಾಂಕಿನ ಹಣಕಾಸು ನೀತಿ ಸಮಿತಿಯನ್ನೂ ಒಳಗೊಂಡಂತೆ ಈಗಿರುವ ನಿರೀಕ್ಷೆ ಎಂದರೆ, ಬೆಳವಣಿಗೆಯ ಮಂದಗತಿ ಎದುರಿಸಲು ಬಜೆಟ್ ಉತ್ತೇಜನ ನೀಡಲಿದೆ ಎಂಬುದು. ಆದರೂ ಈ ಹಿಂಜರಿತದಿಂದ ಹೊರಬರಲು ಪ್ರಲೋಭನಕಾರಿಯಾದ ಮತ್ತು ಜನಪ್ರಿಯ ಮಾದರಿಯ ಬೇಡಿಕೆಗಳಿಗೆ ಸರ್ಕಾರ ಪ್ರತಿರೋಧ ತೋರಬೇಕು. ಇದಕ್ಕೆ ಒಂದಕ್ಕಿಂತ ಹೆಚ್ಚು ಕಾರಣಗಳಿವೆ.
ಮೊದಲ ಮತ್ತು ಪ್ರಮುಖ ಕಾರಣ ಎಂದರೆ, ದೊಡ್ಡ ಪ್ರಮಾಣದಲ್ಲಿ ತನ್ನ ಖರ್ಚು ನಿಭಾಯಿಸಲು ಸರ್ಕಾರದ ಬಳಿ ಹಣ ಇಲ್ಲ. ಜಿಡಿಪಿ ಬೆಳವಣಿಗೆ ಕುಂಠಿತ ಇದ್ದಾಗ, ತೆರಿಗೆ ಸಂಗ್ರಹ ಮಾಡಬೇಕಾಗುತ್ತದೆ. ತೆರಿಗೆ ಆದಾಯ ಸಂಗ್ರಹ ಮಿತಿಯಲ್ಲಿದ್ದಾಗ ಸರ್ಕಾರದ ವೆಚ್ಚ ಕೂಡ ನಿರ್ಬಂಧಕ್ಕೆ ಒಳಪಡುತ್ತದೆ.
ನಿಗದಿತ ವಾರ್ಷಿಕ ಗುರಿಗಿಂತಲೂ ಸರ್ಕಾರದ ತೆರಿಗೆ ಆದಾಯ ರೂ. 2 ಲಕ್ಷ ಕೋಟಿಯಷ್ಟು ಕುಸಿತ ಕಂಡಿದೆ. ಕಂಪ್ಟ್ರೋಲರ್ ಜನರಲ್ ಆಫ್ ಅಕೌಂಟ್ಸ್ ( ಸಿ ಜಿ ಎ ) ಮಾಹಿತಿಯು ಪ್ರಸ್ತುತ ಹಣಕಾಸು ವರ್ಷದ ಮೊದಲ ಏಳು ತಿಂಗಳ ಒಟ್ಟು ತೆರಿಗೆಗಳ ಬೆಳವಣಿಗೆಯನ್ನು ಮುಂದಿಟ್ಟಿದ್ದು 2019-20ರ ಪ್ರಗತಿ 2009- 10ರಷ್ಟು ಅತ್ಯಂತ ಕಡಿಮೆ ಇದೆ. ಈಗಾಗಲೇ, ಕಾರ್ಪೊರೇಟ್ ತೆರಿಗೆಯಲ್ಲಿ ಸುಧಾರಣೆ ತರುವ ಉದ್ದೇಶದಿಂದ ಸರ್ಕಾರವು ಆ ಕ್ಷೇತ್ರದ ಆದಾಯ ತ್ಯಜಿಸಿದ್ದು ಇದು ಕಾರ್ಪೊರೇಟ್ ಲಾಭದ ಮೇಲಿನ ತೆರಿಗೆ ಸಂಗ್ರಹವನ್ನು ಮೊಟಕುಗೊಳಿಸುತ್ತದೆ.
ಹಣ ಸಂಗ್ರಹದ ಇತರೆ ಮೂಲ ಎಂದರೆ ತೆರಿಗೆಯೇತರ ಆದಾಯ. ಆರ್‌ಬಿಐನಿಂದ ಸರ್ಕಾರ ಪಡೆದ ಹಣವನ್ನು ಈಗಾಗಲೇ ಗಣನೆಗೆ ತೆಗೆದುಕೊಳ್ಳಲಾಗಿದೆ. ಜೊತೆಗೆ, ಈ ವರ್ಷ ಬಿ ಪಿ ಸಿ ಎಲ್ ಅಥವಾ ಏರ್ ಇಂಡಿಯಾ ಷೇರುಗಳ ಮಾರಾಟ ಪೂರ್ಣಗೊಳ್ಳುವ ಸಾಧ್ಯತೆ ಇಲ್ಲ. ಆದ್ದರಿಂದ, ತೆರಿಗೆಯೇತರ ಆದಾಯವು ತೆರಿಗೆ ಆದಾಯದಲ್ಲಿನ ಕೊರತೆ ನೀಗಿಸಲು ಸಾಧ್ಯ ಎಂದು ತೋರುತ್ತಿಲ್ಲ. ಸರ್ಕಾರದ ಇತ್ತೀಚಿನ ಅಂಕಿಅಂಶಗಳ ಪ್ರಕಾರ, ಈ ವರ್ಷ ಅಂದರೆ 2019-20ರ ಸಾಲಿನ ಬಂಡವಾಳ ಹಿಂತೆಗೆತ ಪ್ರಕ್ರಿಯೆಯಿಂದ ಸಂಗ್ರಹ ಆಗಬೇಕಿದ್ದ ರೂ 105,000 ಕೋಟಿಯಲ್ಲಿ ಕೇವಲ ಶೇ 16.53ರಷ್ಟು ಹಣ ಮಾತ್ರ ಸಂಚಯಗೊಂಡಿದೆ. 2019 ರ ನವೆಂಬರ್ 11ರವರೆಗೆ ಸಂಗ್ರಹ ಕಾರ್ಯ ನಡೆದಿದೆ.
ಎರಡನೆಯದಾಗಿ, ಸಾರ್ವಜನಿಕ ಮೂಲಸೌಕರ್ಯಕ್ಕಾಗಿ ಮಾಡಿದ ವೆಚ್ಚ ಸಹಾಯಕ್ಕೆ ಬರುವುದಿಲ್ಲ. ಮೂಲಸೌಕರ್ಯ ಯೋಜನೆಗಳು ದೀರ್ಘಕಾಲದಲ್ಲಿ ಹಣ ತಂದುಕೊಡಲಿವೆ. ಆದರೆ ಆರ್ಥಿಕ ಪ್ರಗತಿಗೆ ತುರ್ತಾಗಿ ಉತ್ತೇಜನ ಅಗತ್ಯ. ಹೆಚ್ಚು ಕಾಲಾವಕಾಶ ಈಗ ಉಳಿದಿಲ್ಲ.
ಮೂರನೆಯದಾಗಿ, ತೆರಿಗೆ ಕಡಿತದ ಮೂಲಕವೂ ಉತ್ತೇಜನ ನೀಡಬಹುದಾದರೂ, ಅದು ಈಗಾಗಲೇ ಹೆಚ್ಚಿರುವ ವೆಚ್ಚವನ್ನು ಸರಿದೂಗಿಸದು. ಅಲ್ಲದೆ ವೈಯಕ್ತಿಕ ಆದಾಯ ತೆರಿಗೆ ಕಡಿತ ಮಾಡಿದರೆ ಜನಸಂಖ್ಯೆಯ ಸಣ್ಣ ಭಾಗಕ್ಕೆ ಪ್ರಯೋಜನ ನೀಡಿದಂತಾಗುತ್ತದೆ. ಏಕೆಂದರೆ ದೇಶದ ಜನಸಂಖ್ಯೆಯ ಕೇವಲ ಶೇ 5 ರಷ್ಟು ಮಂದಿ ಮಾತ್ರ ಆದಾಯ ತೆರಿಗೆ ಪಾವತಿಸುತ್ತಾರೆ.
ಫೆಬ್ರವರಿ 2019 ರ ಮಧ್ಯಂತರ ಬಜೆಟ್‌ನಲ್ಲಿ ಕೂಡ ಈ ತಂತ್ರ ಪ್ರಯೋಗವಾಗಿದೆ. ಅಂದಿನ ಹಣಕಾಸು ಸಚಿವ ಪಿಯೂಷ್ ಗೋಯಲ್ ಅವರು ಮಂಡಿಸಿದ ಬಜೆಟ್ ಸಂದರ್ಭದಲ್ಲಿ, ರೂ. 5 ಲಕ್ಷಕ್ಕಿಂತ ಕಡಿಮೆ ಆದಾಯ ಇರುವವರು ತೆರಿಗೆ ಪಾವತಿಸುವ ಅಗತ್ಯ ಇಲ್ಲ ಎಂದು ಘೋಷಿಸಿದರು. ಇದರಿಂದ ಜನರ ಜೇಬಿನಲ್ಲಿ ತಿಂಗಳಿಗೆ ರೂ 1000ಕ್ಕಿಂತ ಹೆಚ್ಚು ಹಣ ಉಳಿಯಿತು.
ಇದಲ್ಲದೆ, ಒಂದು ಮನೆ ಮಾರಾಟಕ್ಕೆ ಇದ್ದ ಬಂಡವಾಳ ವಿನಾಯಿತಿಯನ್ನು ಎರಡು ಮನೆಗಳ ಮಾರಾಟದವರೆಗೆ ವಿಸ್ತರಿಸಲಾಯಿತು. ಸಂಬಳದಾರರಿಗೆ ನಿರ್ದಿಷ್ಟ ಮೊತ್ತದ ಕಡಿತವನ್ನು ( Standard deduction ) ರೂ. 40,000 ರಿಂದ ರೂ. 50,000ಕ್ಕೆ ಏರಿಸಲಾಯಿತು. ಅಲ್ಲದೆ ಬ್ಯಾಂಕ್ ಖಾತೆಗಳಲ್ಲಿನ ಉಳಿತಾಯದ ಬಡ್ಡಿ ಮೇಲಿನ ತೆರಿಗೆಯ ಮಿತಿಯನ್ನು ರೂ. 10,000ದಿಂದ ರೂ. 50,000ರವರೆಗೆ ಏರಿಕೆ ಮಾಡಲಾಯಿತು. ಈ ಎಲ್ಲಾ ಬಗೆಯ ತೆರಿಗೆ ವಿನಾಯ್ತಿ ಹೊರತಾಗಿ, 2019ರ ಉದ್ದಕ್ಕೂ ಆರ್ಥಿಕ ಬಿಕ್ಕಟ್ಟು ತಲೆದೋರಿತು.
ನಾಲ್ಕನೆಯ ಅಂಶ ಎಂದರೆ, ಆರ್ಥಿಕತೆ ಉತ್ತೇಜನಕ್ಕಾಗಿ ಸರ್ಕಾರ ಸಾಲ ಪಡೆಯುವ ಅವಕಾಶವನ್ನು ಈಗಾಗಲೇ ವಿಸ್ತರಿಸಲಾಗಿದೆ. ಸರ್ಕಾರ ಹೆಚ್ಚಾಗಿ ಹಣ ಎರವಲು ಅಥವಾ ಸಾಲ ಪಡೆಯುವುದು ಹಣ ಉಳಿತಾಯ ಮಾಡಿದವರಿಂದ: ಉಳಿತಾಯಗಾರರು ಇರಿಸಿದ ಠೇವಣಿ ಮೊತ್ತ ಬಳಸಿಕೊಂಡು ಬ್ಯಾಂಕುಗಳು ಸರ್ಕಾರಕ್ಕೆ ಸಾಲ ನೀಡುತ್ತವೆ. ಹೀಗಾಗಿ, ಆರ್ಥಿಕತೆಯಲ್ಲಿ ಸರ್ಕಾರದ ಒಟ್ಟು ಸಾಲವು ಒಟ್ಟು ಉಳಿತಾಯವನ್ನು ಮೀರಲು ಸಾಧ್ಯ ಇಲ್ಲ.
ಕೇಂದ್ರ, ರಾಜ್ಯ ಸರ್ಕಾರಗಳು ಹಾಗೂ ಸಾರ್ವಜನಿಕ ವಲಯ ಈಗಾಗಲೇ ಪಡೆದಿರುವ ಒಟ್ಟು ಸಾಲ ಜಿಡಿಪಿಯ ಶೇ 8 ರಿಂದ 9ರಷ್ಟು ಇದೆ. ಮನೆ ಉಳಿತಾಯದಿಂದ ಪ್ರಸ್ತುತ ಜಿಡಿಪಿಗೆ ಶೇಕಡಾ 6.6 ರಷ್ಟು ಹಣ ಸೇರುತ್ತದೆ. ಸರ್ಕಾರಕ್ಕೆ ಸಾಲ ನೀಡಲು ಈ ಹಣ ಸಾಲದು. ಆದ್ದರಿಂದ, ಸರ್ಕಾರವು ಜಿಡಿಪಿಯ ಶೇ 2.4 ರಷ್ಟು ಹಣವನ್ನು ವಿದೇಶಿಯರಿಂದ ಸಾಲ ಪಡೆದಿದೆ. ಆದಾಯದಲ್ಲಿ ನಿಧಾನಗತಿಯ ಬೆಳವಣಿಗೆ ಮತ್ತು ಸಾಕಷ್ಟು ಉದ್ಯೋಗ ಸೃಷ್ಟಿ ಆಗದೇ ಇರುವುದರಿಂದಾಗಿ ದೇಶದಲ್ಲಿ ಉಳಿತಾಯ ಹೆಚ್ಚುತ್ತಿಲ್ಲ. ದೊಡ್ಡ ಮಟ್ಟದಲ್ಲಿ ಸರ್ಕಾರದ ಸಾಲ ಹೆಚ್ಚಿದರೆ ವಿದೇಶಿ ಸಾಲಗಾರರ ಮೇಲಿನ ಭಾರತದ ಅವಲಂಬನೆಯೂ ಅಧಿಕವಾಗುತ್ತದೆ. ಅಮೆರಿಕ- ಇರಾನ್ ನಡುವೆ ಉದ್ವಿಗ್ನತೆ ತಲೆದೋರಿ ಜಾಗತಿಕ ತೈಲಬೆಲೆ ಹೆಚ್ಚಿರುವುದು ರೂಪಾಯಿಯ ವಿನಿಮಯ ದರದ ಮೌಲ್ಯದ ಮೇಲೆ ಪರಿಣಾಮ ಬೀರಲಿದೆ.
ಆದ್ದರಿಂದ, ಬಜೆಟ್ ಮಾಡಬಹುದಾದ ಉತ್ತಮ ಕೆಲಸ ಎಂದರೆ ತನ್ನ ವೆಚ್ಚ ಕಡಿಮೆ ಮಾಡುವುದಿಲ್ಲ ಎಂಬ ಬಗ್ಗೆ ಖಚಿತವಾಗಿರುವುದು. ಹೀಗೆ ಮಾಡುವ ವೆಚ್ಚ ವಿಶೇಷವಾಗಿ ಬೇಡಿಕೆ ಕುಸಿತದ ಮೂಲ ಎನಿಸಿಕೊಂಡ ಅಸಂಘಟಿತ ವಲಯವನ್ನು ತಲುಪುತ್ತದೆ. ಪ್ರಧಾನಮಂತ್ರಿ- ಕಿಸಾನ್ ಯೋಜನೆ ಮತ್ತು ಮಹಾತ್ಮ ಗಾಂಧಿ ನರೇಗಾ ಯೋಜನೆ ಮೂಲಕ ಗ್ರಾಮೀಣ ಆದಾಯ ಮತ್ತು ಉಪಭೋಗ ಹೆಚ್ಚಿಸಬಹುದು. ಇದರಿಂದ ಜನಸಂಖ್ಯೆಯ ದೊಡ್ಡ ಭಾಗಕ್ಕೆ ಹಣ ನೀಡಿದಂತಾಗಿ ಅವರ ಖರೀದಿ ಒಲವನ್ನು ಹೆಚ್ಚಿಸಿದಂತಾಗುತ್ತದೆ.
ಲೇಖಕಿ:- ಪೂಜಾ ಮೆಹ್ರಾ