ನವದೆಹಲಿ: ತೈಲ ರಹಿತ ಕಂಪನಿಗಳು ಸ್ಪರ್ಧೆಯನ್ನು ಹೆಚ್ಚಿಸಲು ಹಾಗೂ ಪೆಟ್ರೋಲ್ ಪಂಪ್‌ಗಳನ್ನು ಸ್ಥಾಪಿಸಲು ಅನುವು ಮಾಡಿಕೊಡಲು ಕೇಂದ್ರ ಸರ್ಕಾರವು ಇಂಧನ ಚಿಲ್ಲರೆ ಮಾರಾಟದ ಮಾನದಂಡಗಳ ಬದಲಾವಣೆಗೆ ಆರ್ಥಿಕ ವ್ಯವಹಾರಗಳ ಕ್ಯಾಬಿನೆಟ್ ಸಮಿತಿ ಅನುಮೋದನೆ ನೀಡಿದೆ.
ಕ್ಯಾಬಿನೆಟ್ ತೆಗೆದುಕೊಂಡ ನಿರ್ಧಾರಗಳ ಬಗ್ಗೆ ಸುದ್ದಿಗಾರರಿಗೆ ಮಾತನಾಡಿ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ್ ಜಾವಡೇಕರ್, ಇಂಧನದ ಚಿಲ್ಲರೆ ವ್ಯಾಪಾರದಲ್ಲಿ ಹೂಡಿಕೆ ಮತ್ತು ಸ್ಪರ್ಧೆಯನ್ನು ಹೆಚ್ಚಿಸಿಲು ನಿರ್ಧರಿಸಲಾಗಿದೆ ಎಂದರು.
ಪ್ರಸ್ತುತ ಭಾರತದಲ್ಲಿ ಇಂಧನ ಚಿಲ್ಲರೆ ವ್ಯಾಪಾರ ಪರವಾನಗಿ ಪಡೆಯಲು ಕಂಪನಿಯು ಹೈಡ್ರೋಕಾರ್ಬನ್ ಪರಿಶೋಧನೆ ಮತ್ತು ಉತ್ಪಾದನೆ, ಸಂಸ್ಕರಣೆ, ಪೈಪ್‌ಲೈನ್‌ಗಳು ಅಥವಾ ದ್ರವೀಕೃತ ನೈಸರ್ಗಿಕ ಅನಿಲ (ಎಲ್‌ಎನ್‌ಜಿ) ಟರ್ಮಿನಲ್‌ಗಳಲ್ಲಿ ₹ 2,000 ಕೋಟಿಯಷ್ಟು ಹೂಡಿಕೆ ಮಾಡಬೇಕಾಗುತ್ತದೆ.
ಸಾರಿಗೆ ಇಂಧನ ಮಾರಾಟಕ್ಕೆ ಅನುಮತಿ ನೀಡುವ ಮಾರ್ಗಸೂಚಿಗಳ ಪರಿಶೀಲನೆಗೆ ಆರ್ಥಿಕ ವ್ಯವಹಾರಗಳ ಕ್ಯಾಬಿನೆಟ್ ಸಮಿತಿ (ಸಿಸಿಇಎ) ಅನುಮೋದನೆ ನೀಡಿದೆ ಎಂದು ಜಾವಡೇಕರ್ ಹೇಳಿದರು. ₹250 ಕೋಟಿ ವಹಿವಾಟು ಹೊಂದಿರುವ ಕಂಪನಿಗಳು ಇಂಧನ ಚಿಲ್ಲರೆ ವ್ಯಾಪಾರಕ್ಕೆ ಪ್ರವೇಶಿಸಬಹುದು. ಶೇ.5ರಷ್ಟು ಮಳಿಗೆಗಳು ಗ್ರಾಮೀಣ ಪ್ರದೇಶಗಳಲ್ಲಿರುತ್ತವೆ ಎಂಬ ಷರತ್ತಿಗೆ ಒಳಪಟ್ಟಿರುತ್ತದೆ. ಪರಿಗಣನೆಯಲ್ಲಿರುವ ಇಂಧನಗಳಲ್ಲಿ ಪೆಟ್ರೋಲ್, ಡೀಸೆಲ್, ಎಲ್‌ಎನ್‌ಜಿ ಮತ್ತು ಸಿಎನ್‌ಜಿ ಸೇರಿವೆ.
ಸರ್ಕಾರಿ ಸ್ವಾಮ್ಯದ ತೈಲ ಮಾರುಕಟ್ಟೆ ಕಂಪನಿಗಳಾದ ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿ), ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಬಿಪಿಸಿಎಲ್) ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ನ (ಎಚ್‌ಪಿಸಿಎಲ್) ದೇಶಾದ್ಯಂತ ಸುಮಾರು 65,000 ಪೆಟ್ರೋಲ್ ಪಂಪ್‌ಗಳನ್ನು ಹೊಂದಿವೆ.