ನವದೆಹಲಿ: ಮೊದಲ ಹಂತದ ಲಾಕ್‌ಡೌನ್‌ನಿಂದ 12 ಕೋಟಿ ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ಈ ಬಿಕ್ಕಟ್ಟು ಎದುರಿಸಲು ಸರ್ಕಾರವು ಪ್ರತಿ ಕುಟುಂಬಕ್ಕೂ ತಕ್ಷಣವೇ ಕಡ್ಡಾಯವಾಗಿ ಆರ್ಥಿಕ ನೆರವು ನೀಡಬೇಕು. ಆರ್ಥಿಕ ಚಟುವಟಿಕೆಗಳು ಸ್ಥಗಿತ ಆಗಿರುವುದರಿಂದ ನಿರುದ್ಯೋಗದ ಪ್ರಮಾಣ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಹೇಳಿದರು.
ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಅರ್ಹ ಫಲಾನುಭವಿಗಳಿಗೆ ಇನ್ನೂ ಪಡಿತರ ಧಾನ್ಯ ತಲುಪಿಲ್ಲ. ಸಬ್ಸಿಡಿ ಆಹಾರ ಧಾನ್ಯ ಅಗತ್ಯವಿರುವ 11 ಕೋಟಿ ಜನ ಸಾರ್ವಜನಿಕ ವಿತರಣಾ ವ್ಯವಸ್ಥೆಯಿಂದ ಹೊರಗಿದ್ದಾರೆ. 10 ಕೆ.ಜಿ ಆಹಾರ ಧಾನ್ಯ ಒದಗಿಸುವ ಸರ್ಕಾರದ ಬದ್ಧತೆಯಾಗಿರಬೇಕು. ಈ ಬಿಕ್ಕಟ್ಟಿನ ವೇಳೆಯಲ್ಲಿ ಕುಟುಂಬದ ಪ್ರತಿ ವ್ಯಕ್ತಿಗೆ ಪ್ರತಿ ತಿಂಗಳು 1 ಕೆ.ಜಿ ದ್ವಿದಳ ಧಾನ್ಯ ಮತ್ತು ಅರ್ಧ ಕೆ.ಜಿ ಸಕ್ಕರೆ ಕೊಡಬೇಕು ಎಂದು ಇಂದು ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯೂಸಿ) ಸಭೆಯಲ್ಲಿ ಸೋನಿಯಾ ಒತ್ತಾಯಿಸದರು.
ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ (ಎಂಎಸ್‌ಎಂಇ) ಉಳಿವಿಗಾಗಿ ವಿಶೇಷ ಪ್ಯಾಕೇಜ್ ಅನ್ನು ತುರ್ತಾಗಿ ಘೋಷಿಸಬೇಕು. ಎಂಎಸ್‌ಎಂಇ ಇಂದು ಸುಮಾರು 11 ಕೋಟಿ ಉದ್ಯೋಗಿಗಳನ್ನು ನೇಮಿಸಿಕೊಂಡಿವೆ. ಇದರ ಪಾಲು ಜಿಡಿಪಿಯಲ್ಲಿ ಮೂರನೇ ಒಂದು ಭಾಗದಷ್ಟಿದೆ. ಆರ್ಥಿಕ ನಾಶದಿಂದ ಅವರನ್ನು ರಕ್ಷಿಸಬೇಕಾದರೇ ವಿಶೇಷ ಪ್ಯಾಕೇಜ್ ಅನ್ನು ತುರ್ತಾಗಿ ಕಡ್ಡಾಯವಾಗಿ ಘೋಷಿಸಬೇಕು ಎಂದು ಹೇಳಿದರು.
ಈಗಿನ ಲಾಕ್‌ಡೌನ್ ಮೇ 3ರ ನಂತರ ಹೇಗೆ ನಿರ್ವಹಿಸಲಾಗುವುದು ಎಂಬುದರ ಕುರಿತು ಕೇಂದ್ರ ಸರ್ಕಾರಕ್ಕೆ ಸ್ಪಷ್ಟ ಕಲ್ಪನೆ ಇದ್ದಂತೆ ಕಾಣುತ್ತಿಲ್ಲ ಎಂದು ಕಾಂಗ್ರೆಸ್ ಮುಖ್ಯಸ್ಥೆ ಟೀಕಿಸಿದರು.