ಚೆನ್ನೈ: 2004-2011ರ ಅವಧಿಯಲ್ಲಿ ಸಾಲ ನೀಡುವಿಕೆಯು ಪ್ರಸ್ತುತ ಆರ್ಥಿಕತೆಯಲ್ಲಿ ಸಾಲದ ಬಿಕ್ಕಟ್ಟಿಗೆ ಕಾರಣವಾಗಿದ್ದು, ಬ್ಯಾಂಕ್ಗಳ ಸಂಯೋಜನೆಯಿಂದ ಪರಿಸ್ಥಿತಿ ಸುಧಾರಿಸಲಿದೆ ಎಂದು ನೀತಿ ಆಯೋಗದ ಉಪಾಧ್ಯಕ್ಷ ರಾಜೀವ್ ಕುಮಾರ್ ಹೇಳಿದ್ದಾರೆ.
ಮದ್ರಾಸ್ ಸ್ಕೂಲ್ ಆಫ್ ಎಕನಾಮಿಕ್ಸ್ ಆಯೋಜಿಸಿದ ಕಾರ್ಯಕ್ರಮದ ಬಳಿಕ 'ಈ ಟಿವಿ ಭಾರತ್'ನೊಂದಿಗೆ ಮಾತನಾಡಿದ ಅವರು, 2024ರ ವೇಳೆಗೆ 5 ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನು ಭಾರತ ಸಾಧಿಸಲಿದೆ. ಭವಿಷ್ಯದ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ನಾವು ವರ್ಷಕ್ಕೆ ಶೇ 12ರಷ್ಟು ಜಿಡಿಪಿ ಬೆಳವಣಿಗೆಯ ದರ ಕಾಪಾಡಿಕೊಳ್ಳಬೇಕಿದೆ ಎಂದರು.
ಪ್ರಸ್ತುತ ಆರ್ಥಿಕ ಪರಿಸ್ಥಿತಿಯು ಈ ಹಿಂದಿನ ನೀತಿಗಳೇ ಕಾರಣವೆಂದ ರಾಜೀವ್ ಕುಮಾರ್, '2004-2011ರ (ಯುಪಿಎ) ಅವಧಿಯಲ್ಲಿನ ಸಾಲ ನೀಡುವಿಕೆ ಪ್ರಸ್ತುತ ಆರ್ಥಿಕತೆಯಲ್ಲಿನ ಬಿಕ್ಕಟ್ಟಿಗೆ ಕಾರಣವಾಗಿದೆ. ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಇತ್ತೀಚಿನ ಘೋಷಿಸಿದ ಬ್ಯಾಂಕ್ಗಳ ವಿಲೀನ ಪ್ರಕ್ರಿಯೆಯು ಪರಿಸ್ಥಿತಿಯನ್ನು ಸುಧಾರಿಸಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ರು.
ಆರ್ಬಿಐನ ಮಾಜಿ ಗವರ್ನರ್ ಸಿ. ರಂಗರಾಜನ್ ಸಹ ಪಾಲ್ಗೊಂಡು ನಿಧಾನಗತಿಯ ಆರ್ಥಿಕತೆ ಮತ್ತು ಆರ್ಥಿಕ ಹಿಂಜರಿತದ ನಡುವಿನ ವ್ಯತ್ಯಾಸವನ್ನು ವಿವರಿಸಿದರು. ಜಿಡಿಪಿ ಬೆಳವಣಿಗೆ ದರ ಕುಸಿತವಾಗುತ್ತಿರುವುದರಿಂದ ಪ್ರಸ್ತುತ ಆರ್ಥಿಕತೆ ಸ್ಥಿತಿಯು 'ಮಂದಗತಿ'ಯಲ್ಲಿ ಸಾಗುತ್ತಿದೆ ಎಂದರು.
ನಿಧಾನಗತಿಯು ಜಿಡಿಪಿ ಬೆಳವಣಿಗೆಯ ದರದಲ್ಲಿನ ಕುಸಿತದಿಂದ ಸಂಭವಿಸಿದೆ. ಆದರೆ, ಆರ್ಥಿಕ ಹಿಂಜರಿತವು ಜಿಡಿಪಿಯಲ್ಲಿನ ಕುಸಿತವಾಗಿದೆ. ಪ್ರಸ್ತುತ ಆರ್ಥಿಕತೆಯು ಮಂದಗತಿಯಲ್ಲಿ ಸಾಗುತ್ತಿದೆ ಎಂದು ವಿಶ್ಲೇಷಿಸಿದರು.