ಮುಂಬೈ: ನಿಷೇಧದ ಅವಧಿಯಲ್ಲಿ ಸಾಲಗಳ ಮೇಲಿನ ಬಡ್ಡಿ ಮನ್ನಾ ಮಾಡುವಂತೆ ಕೋರಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆಯು ಇಂದು ಸುಪ್ರೀಂಕೋರ್ಟ್‌ನಲ್ಲಿ ನಡೆಯುವ ಮುನ್ನ ಹಾಗೂ ಏಷ್ಯಾದ ಸೂಚ್ಯಂಕಗಳ ಪ್ರವೃತ್ತಿಗೆ ಅನುಗುಣವಾಗಿ ಭಾರತೀಯ ಮಾರುಕಟ್ಟೆಗಳು ಬುಧವಾರದ ಆರಂಭಕ ವಹಿವಾಟಿನಲ್ಲಿ ಕುಸಿತದೊಂದಿಗೆ ಚಾಲನೆಗೊಂಡಿತು.
ಮುಂಬೈ ಷೇರು ಸೂಚ್ಯಂಕ ಸೆನ್ಸೆಕ್ಸ್ 101 ಅಂಕ ಕುಸಿದು 40,523 ಅಂಕಗಳ ಮಟ್ಟದಲ್ಲಿಯೂ ರಾಷ್ಟ್ರೀಯ ಸೂಚ್ಯಂಕ ನಿಫ್ಟಿ 24 ಅಂಕ ಇಳಿಕೆಯಾಗಿ 11,910 ಅಂಕಗಳ ಮಟ್ಟ ತಲುಪಿತು. ಒಎನ್‌ಜಿಸಿ, ಪವರ್‌ಗ್ರಿಡ್, ಎನ್‌ಟಿಪಿಸಿ ಮತ್ತು ಇಂಡಸ್‌ಇಂಡ್ ಬ್ಯಾಂಕ್ ಷೇರು ದರ ಇಳಿಕೆಯಾಯಿತು. ಮತ್ತೊಂದೆಡೆ ಟಾಟಾ ಸ್ಟೀಲ್ ದರ ಶೇ 1ರಷ್ಟು ಲಾಭ ಗಳಿಸಿದೆ.
ಇದರ ನಡುವೆಯೂ ವಿಪ್ರೊ 2021ರ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದಲ್ಲಿ ಹಲವು ನಿಯತಾಂಕಗಳಲ್ಲಿ ತನ್ನ ಕಾರ್ಯಕ್ಷಮತೆ ಸುಧಾರಿಸಿದರೂ ಶೇ 5ರಷ್ಟು ಕುಸಿದಿದೆ. ಕರ್ನಾಟಕ ಬ್ಯಾಂಕ್ ತನ್ನ ಸೆಪ್ಟೆಂಬರ್ ತ್ರೈಮಾಸಿಕ ಫಲಿತಾಂಶಗಳನ್ನು ಪ್ರಕಟಿಸಿದ ನಂತರ ಶೇ 5ರಷ್ಟು ಏರಿಕೆಯಾಗಿದೆ.
ಇನ್ಫೋಸಿಸ್, ವೇದಾಂತ, ಫ್ಯೂಚರ್ ರಿಟೇಲ್ ಇಂದು ಗಮನ ಸೆಳೆಯುವ ಷೇರುಗಳಲ್ಲಿ ಸೇರಿವೆ. ಇನ್ಫೋಸಿಸ್ ಜೊತೆಗೆ ಆದಿತ್ಯ ಬಿರ್ಲಾ ಮನಿ, ಡೆನ್ ನೆಟ್ವರ್ಕ್ಸ್, ರಿಲಯನ್ಸ್ ಇಂಡಸ್ಟ್ರಿಯಲ್ ಇನ್ಫ್ರಾಸ್ಟ್ರಕ್ಚರ್, ಟಾಟಾ ಎಲ್ಕ್ಸ್ಸಿ, ಟಾಟಾ ಸ್ಟೀಲ್ ಬಿಎಸ್ಎಲ್ ಮತ್ತು ಟೈಟಘರ್ ವ್ಯಾಗನ್ಸ್ ಇಂದು ತಮ್ಮ ತ್ರೈಮಾಸಿಕ ಫಲಿತಾಂಶ ಪ್ರಕಟಿಸಲಿವೆ.