ನವದೆಹಲಿ : ಕೊರೊನಾ ವೈರಸ್ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ದೇಶಾದ್ಯಂತ ಲಾಕ್‌ಡೌನ್ ಜಾರಿಯಲ್ಲಿದೆ. ಇದು ತೆರವಾದ 10 ದಿನಗಳದೊಳಗೆ ಬಿಎಸ್-4 ವಾಹನಗಳ ಮಾರಾಟ ಮಾಡುವಂತೆ ಆಟೋಮೊಬೈಲ್ ವಿತರಕರಿಗೆ ಸುಪ್ರೀಂಕೋರ್ಟ್ ಅನುಮತಿ ನೀಡಿದೆ. ಈ ಹಿಂದೆ ದೇಶಾದ್ಯಂತ ಭಾರತ್ ಸ್ಟೇಜ್-4 (ಬಿಎಸ್ IV) ವಾಹನಗಳ ಮಾರಾಟಕ್ಕೆ 2020ರ ಮಾರ್ಚ್ 31ರವರೆಗೆ ಗಡುವನ್ನು ಸುಪ್ರೀಂಕೋರ್ಟ್ ನೀಡಿತ್ತು.
ಫೆಡರೇಷನ್ ಆಫ್ ಆಟೋಮೊಬೈಲ್ ಡೀಲರ್ಸ್ ಅಸೋಸಿಯೇಶನ್ (ಎಫ್‌ಎಡಿಎ), ಕೊರೊನಾ ವೈರಸ್ ಹಾಗೂ ಮಂದಗತಿಯ ಆರ್ಥಿಕತೆಯಿಂದಾಗಿ ವಾಹನಗಳ ದಾಸ್ತಾನು ಉಳಿದುಕೊಂಡಿದೆ. ಈ ಹಿಂದಿನ ವಾಯ್ದೆಯನ್ನು ಮುಂದೂಡುವಂತೆ ಮನವಿ ಸಲ್ಲಿಸಿತು. ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಶುಕ್ರವಾರ ಈ ವಿಷಯವನ್ನು ಆಲಿಸಿದ ನ್ಯಾಯಮೂರ್ತಿಗಳಾದ ಅರುಣ್ ಮಿಶ್ರಾ ಮತ್ತು ದೀಪಕ್ ಗುಪ್ತಾ ಅವರಿದ್ದ ನ್ಯಾಯಪೀಠ, 2020ರ ಏಪ್ರಿಲ್ 1ರಿಂದ ಯಾವುದೇ ಬಿಎಸ್-4 ವಾಹನಗಳನ್ನು ದೆಹಲಿ-ಎನ್‌ಸಿಆರ್‌ನಲ್ಲಿ ಮಾರಾಟ ಮಾಡಲು ಅನುಮತಿ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿತು.
ಮಾರ್ಚ್ 24ರಿಂದ ಜಾರಿಗೆ ಬಂದಿರುವ ಲಾಕ್‌ಡೌನ್ ನಂತರ ಈ 10 ದಿನಗಳ ಅವಧಿಯಲ್ಲಿ ಮಾರಾಟವಾಗದ ಉಳಿದ ಬಿಎಸ್-4 ವಾಹನಗಳಲ್ಲಿ ಕೇವಲ ಶೇ.10ರಷ್ಟು ಮಾರಾಟ ಮಾಡಲು ಅನುಮತಿ ನೀಡಲಾಗುವುದು ಎಂದು ಹೇಳಿದೆ. ಭಾರತ್ ಸ್ಟೇಜ್-6 ವಾಹನ ನೋಂದಣಿಯ ಗಡುವನ್ನು ಮೂರು ತಿಂಗಳು ಮುಂದೂಡುವಂತೆ ಕೋರಿ ದ್ವಿಚಕ್ರ ವಾಹನ ಕಂಪನಿ ಹೀರೋ ಮೋಟೊಕಾರ್ಪ್, ಮಾರ್ಚ್ 20ರಂದು ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿತ್ತು.
ಏನಿದು ಭರತ್ ಸ್ಟೇಜ್-6? : ವಾಹನಗಳು ಹೊರ ಉಗುಳುವ ಹೊಗೆಯಲ್ಲಿರುವ ಮಾಲಿನ್ಯಕಾರಕಗಳ ಪ್ರಮಾಣಕ್ಕೆ ಮಿತಿ ವಿಧಿಸುವ ಪರಿಮಾಣವೇ ಭಾರತ್ ಸ್ಟೇಜ್-6 (ಬಿಎಸ್-6). ಭಾರತ್ ಸ್ಟೇಜ್ ದೇಶದಲ್ಲಿ 2000ರಲ್ಲಿ (ಬಿಎಸ್–1) ಜಾರಿಗೆ ಬಂದಿತು. ಹಂತ ಹಂತವಾಗಿ ಬಿಎಸ್–2, ಬಿಎಸ್–3 ಮತ್ತು ಬಿಎಸ್–4 ಜಾರಿಗೆ ಬಂದವು. ಈಗ ಬಿಎಸ್–4 ಜಾರಿಯಲ್ಲಿದೆ. ವಾಹನಗಳಿಂದಾಗುವ ವಾಯು ಮಾಲಿನ್ಯದ ಪ್ರಮಾಣವನ್ನು ಶೀಘ್ರ ಇಳಿಕೆ ಮಾಡಬೇಕು ಎಂಬ ಉದ್ದೇಶದಿಂದ ಬಿಎಸ್–5 ಜಾರಿ ಕೈಬಿಟ್ಟು, ನೇರವಾಗಿ ಬಿಎಸ್-6 ಅನುಷ್ಠಾನಕ್ಕೆ ತರಲಾಗುತ್ತಿದೆ.