ನವದೆಹಲಿ: ಹಣಕಾಸು ಸಚಿವಾಲಯದಿಂದ ವಿದ್ಯುತ್ ಸಚಿವಾಲಯಕ್ಕೆ ವರ್ಗಾವಣೆ ಆದೇಶ ಹೊರ ಬಿದ್ದ 24 ಗಂಟೆಯ ಒಳಗೆ ಹಣಕಾಸು ಸಚಿವಾಲಯದ ಮಾಜಿ ಕಾರ್ಯದರ್ಶಿ ಸುಭಾಷ್ ಚಂದ್ರ ಗಾರ್ಗ್ ಸರ್ಕಾರಿ ಸೇವೆಯಿಂದ ಸ್ವಯಂ ನಿವೃತ್ತಿ ಕೋರಿದ್ದಾರೆ ಎಂದು ಹೇಳಲಾಗುತ್ತಿದೆ.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಲ್ಲಿನ (ಆರ್‌ಬಿಐ) ಮೀಸಲು ನಿಧಿಯಲ್ಲಿರುವ ಹೆಚ್ಚುವರಿ ಹಣದ ಸದುಪಯೋಗ ಮಾಡಿಕೊಳ್ಳಲು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಪ್ರಯತ್ನಿಸುತ್ತಿದೆ. ಹಣಕಾಸು ಕಾರ್ಯದರ್ಶಿಯಾಗಿ ಮುಂಚೂಣಿಯಲ್ಲಿದ್ದ ಗಾರ್ಗ್ ಅವರನ್ನು ಬುಧವಾರ ಹಠಾತಾಗಿ ವಿದ್ಯುತ್ ಸಚಿವಾಲಯಕ್ಕೆ ವರ್ಗಾವಣೆ ಮಾಡಲಾಗಿತ್ತು. ಗಾರ್ಗ್ ಅವರ ಸ್ಥಾನಕ್ಕೆ ಗುಜರಾತ್ ಕೇಡರ್ ಭಾರತೀಯ ಆಡಳಿತಾತ್ಮಕ ಸೇವೆಯ (ಐಎಎಸ್) 1985ರ ಬ್ಯಾಚ್ನ ಅಧಿಕಾರಿ ಅಟಾನು ಚಕ್ರವರ್ತಿ ಅವರನ್ನು ಕಾರ್ಯದರ್ಶಿ ಹುದ್ದೆಗೆ ಹೆಸರಿಸಲಾಗಿದೆ.
ಕಳೆದ ಡಿಸೆಂಬರ್ನಲ್ಲಿ ಕೇಂದ್ರ ಸರ್ಕಾರದ ಕೆಲವು ಧೋರಣೆಗಳನ್ನು ವಿರೋಧಿಸಿ ಆರ್‌ಬಿಐ ಗವರ್ನರ್ ಊರ್ಜಿತ್ ಪಟೇಲ್ ರಾಜೀನಾಮೆ ನೀಡಿದ್ದರು. ಅಧಿಕಾರದ ಅವಧಿ ಇನ್ನೂ 9 ತಿಂಗಳು ಬಾಕಿ ಇರುವಾಗಲೇ ಹುದ್ದೆ ತೊರದಿದ್ದರು. ಇವರ ಬಳಿಕ ಡೆಪ್ಯುಟಿ ಗವರ್ನರ್ ವಿರಳ್ ಆಚಾರ್ಯ ಕೂಡ ರಾಜೀನಾಮೆ ಸಲ್ಲಿಸಿ ಹೊರ ಬಂದರು.