ಮುಂಬೈ: ದೇಶಿ ಇಕ್ವಿಟಿ ಮಾರುಕಟ್ಟೆಯ ಸಕಾರಾತ್ಮಕ ಆರಂಭ ಮತ್ತು ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಇಳಿಕೆಯ ಪರಿಣಾಮ ಡಾಲರ್ ವಿರುದ್ಧ ರೂಪಾಯಿ ಮೌಲ್ಯವು ಒಂದೇ ದಿನದಲ್ಲಿ ಗರಿಷ್ಠ ಏರಿಕೆ ದಾಖಲಿಸಿದ್ದು, ಆರು ತಿಂಗಳಲ್ಲಿ ಇದೇ ಮೊದಲಾಗಿದೆ.
ಬುಧವಾರದ ಆರಂಭಿಕ ವಹಿವಾಟಿನಲ್ಲಿ ಅಮೆರಿಕದ ಡಾಲರ್ ವಿರುದ್ಧ 55 ಪೈಸೆ ಜಿಗಿತ ಕಂಡ ಭಾರತೀಯ ಕರೆನ್ಸಿ ₹ 70.85ಕ್ಕೆ ತಲುಪಿತು.
ಜಾಗತಿಕ ಮಾರುಕಟ್ಟೆಗಳಲ್ಲಿನ ಪ್ರಕ್ಷುಬ್ಧತೆ ಮತ್ತು ಹೂಡಿಕೆದಾರರ ಸ್ವರ್ಗವೆನಿಸಿಕೊಂಡ ಅರ್ಜೆಂಟಿನಾದ ಕರೆನ್ಸಿಯ ಕುಸಿತವು ಮಂಗಳವಾರ ಫಾರೆಕ್ಸ್ ಮಾರುಕಟ್ಟೆಯಲ್ಲಿ ರೂಪಾಯಿ 62 ಪೈಸೆ ಇಳಿಕೆಯಾಯಿತು. ಪರಿಣಾಮ ಡಾಲರ್ ಎದುರು ರೂಪಾಯಿ ಆರು ತಿಂಗಳ ಕನಿಷ್ಠ ಮೌಲ್ಯ ₹ 71.40ಕ್ಕೆ ತಲುಪಿತ್ತು.
ಗರಿಷ್ಠ ಮೌಲ್ಯ ಕಳೆದುಕೊಂಡ ಮರುದಿನವೇ ಇಂಟರ್ಬ್ಯಾಂಕ್ ವಿದೇಶಿ ವಿನಿಮಯ ಕೇಂದ್ರದಲ್ಲಿ ಭಾರತೀಯ ಕರೆನ್ಸಿ ₹ 71.00ರಿಂದ ದಿನದ ವಹಿವಾಟು ಆಂರಭಿಸಿತ್ತು. ಅತ್ಯಂತ ವೇಗವಾಗಿ ₹ 70.85ಕ್ಕೆ ತಲುಪಿ, ಹಿಂದಿನ ದಿನದ ₹ 71.40ಕ್ಕೆ ಕುಸಿದ ಮೌಲ್ಯದಲ್ಲಿ 55 ಪೈಸೆ ವೃದ್ಧಿಸಿಕೊಂಡಿದೆ.