ನವದೆಹಲಿ: ಭಾರತೀಯ ಕರೆನ್ಸಿ ರೂಪಾಯಿ ಪ್ರತಿ ಡಾಲರ್ ಎದುರು 74 ರೂ. ಗಡಿ ದಾಟಿದೆ. ಜಾಗತಿಕ ಆರ್ಥಿಕ ಮತ್ತು ತೈಲ ಮಾರುಕಟ್ಟೆಯು ಮತ್ತಷ್ಟು ಕುಸಿತದ ಸಾಧ್ಯತೆಗಳಿಂದ ಮುಂಬರುವ ದಿನಗಳಲ್ಲಿ ರೂಪಾಯಿ ಚಂಚಲತೆಗೆ ಈಡಾಗಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಸೋಮವಾರ ವಹಿವಾಟಿನಂದು ರೂಪಾಯಿ ಡಾಲರ್ ಎದುರು 17 ಪೈಸೆಯಷ್ಟು ಕುಸಿದು 17 ತಿಂಗಳ ಕನಿಷ್ಠ ಮಟ್ಟಕ್ಕೆ ಇಳಿಯಿತು.
ಕೊರೊನಾ ವೈರಸ್ ಏಕಾಏಕಿ ಜಾಗತಿಕ ಆರ್ಥಿಕತೆಯ ಮೇಲೆ ತೀವ್ರ ದಾಳಿಯು ಜಾಗತಿಕ ಹಣಕಾಸು ಚಂಚಲತೆಗೆ ಹಾಗೂ ತೈಲ ಮಾರುಕಟ್ಟೆಯ ದರ ಸಮರಕ್ಕೆ ಕಾರಣವಾದ ತತ್ಪರಿಣಾಮ ರೂಪಾಯಿ ಮೌಲ್ಯದಲ್ಲಿ ಕುಸಿತ ಕಂಡುಬಂದಿದೆ.
ಕಳೆದ ಹತ್ತು ದಿನಗಳಲ್ಲಿ ರೂಪಾಯಿ ಮೌಲ್ಯ ಗಮನಾರ್ಹವಾಗಿ ದುರ್ಬಲ ಕಂಡುಬಂದಿದೆ. ಕಳೆದ ಒಂದು ತಿಂಗಳಲ್ಲಿ ಸವಕಳಿಯಾಗುತ್ತಾ ಸಾಗಿದ್ದು, ಪ್ರತಿ ಡಾಲರ್‌ಗೆ 71 ರಿಂದ 74ರ ಮಧ್ಯದಲ್ಲಿ ಏರಿಳಿತವಾಗಿದೆ. ತೈಲ ಬೆಲೆಗಳ ಕುಸಿತದ ಪರಿಣಾಮವು ಕರೆನ್ಸಿ ಮಾರುಕಟ್ಟೆಯ ಮೇಲೆ ಗಂಭೀರವಾದ ಪಾತ್ರ ವಹಿಸಿದೆ.
ಸೋಮವಾರದಂದು ಜಾಗತಿಕ ಕಚ್ಚಾ ತೈಲ ಮಾರುಕಟ್ಟೆಯ ಬೆಲೆ ದಾಖಲೆಯ ಪ್ರಮಾಣದಲ್ಲಿ ಕುಸಿತಕಂಡಿದೆ. ಪ್ರತಿ ಬ್ಯಾರಲ್ ಮೇಲೆ ಶೇ. 30ರಷ್ಟು ಕುಸಿದಿದ್ದು, ಇದು 1991ರ ಕೊಲ್ಲಿ ಯುದ್ಧದ ನಂತರದ ಅತಿ ದೊಡ್ಡ ಕುಸಿತವಾಗಿದೆ.
ಕೊರೊನಾ ವೈರಸ್ನಿಂದ ತೈಲದ ಬೇಡಿಕೆ ಗಣನೀಯವಾಗಿ ಇಳಿಕೆಯಾಗಿದ್ದು, ಬೆಲೆ ಸಹ ಭಾರಿ ಪ್ರಮಾಣದಲ್ಲಿ ಕ್ಷೀಣಿಸಿದೆ. ಒಪೆಕ್ ರಾಷ್ಟ್ರಗಳ ಸೌದಿ ಅರೇಬಿಯಾ ದರ ನಿಯಂತ್ರಣಕ್ಕೆ ಉತ್ಪಾದನೆ ಕಡಿತದ ನಿರ್ಧಾರ ಪ್ರಸ್ತಾಪವನ್ನು ಬಹುತೇಕ ಸದಸ್ಯರು ಸಹಮತ ವ್ಯಕ್ತಪಡಿಸಿದವು. ಆದರೆ, ರಷ್ಯಾ ಮಾತ್ರ ಇದಕ್ಕೆ ಒಪ್ಪದೆ ಯಥಾವತ್ತಾಗಿ ಉತ್ಪಾದನೆ ಮಾಡುವುದಾಗಿ ಘೋಷಿಸಿತು. ಇದಕ್ಕೆ ಪ್ರತಿಯಾಗಿ ಸೌದಿ ದಿಢೀರನೆ ಶೇ. 20ರಷ್ಟು ದರ ಇಳಿಕೆ ಮಾಡಿದ್ದು ತೈಲ ಸಮರಕ್ಕೆ ನಾಂದಿ ಹಾಡಿದೆ.