ನವದೆಹಲಿ: ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ) ಆಧರಿಸಿದ ಚಿಲ್ಲರೆ ಹಣದುಬ್ಬರವು ಜುಲೈನಲ್ಲಿ ಶೇ 3.15ರಷ್ಟಾಗಿದೆ ಎಂದು ಕೇಂದ್ರ ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ ತಿಳಿಸಿದೆ.
ಸಿಪಿಐ 2019ರ ಜೂನ್ನಲ್ಲಿ ಶೇ 3.18ಕ್ಕೆ ಹೋಲಿಸಿದರೆ ಅಲ್ಪ ಇಳಿಕೆ ಕಂಡಿದೆ. 2018ರ ಇದೇ ಅವಧಿಯಲ್ಲಿ ಶೇ 4.17ಕ್ಕೆ ಹೋಲಿಸಿದರೆ ಶೇ 1.2ರಷ್ಟು ಕ್ಷೀಣಿಸಿದೆ.
ವಿದ್ಯುತ್ ದರದಲ್ಲಿ ಇಳಿಕೆ ಆಗಿರುವುದರಿಂದ ಚಿಲ್ಲರೆ ಹಣ ದುಬ್ಬರ ತುಸು ತಗ್ಗಿದೆ. ಆಹಾರ ಹಣದುಬ್ಬರ ಶೇ 2.25ರಿಂದ ಶೇ 2.36ಕ್ಕೆ ಏರಿಕೆ ಕಂಡಿದೆ. ತರಕಾರಿಗಳ ದರ ಏರಿಕೆಯು ಶೇ 4.56ರಿಂದ ಶೇ 2.82ಕ್ಕೆ ಇಳಿಕೆಯಾಗಿದೆ. ಬೇಳೆಕಾಳು ಮತ್ತು ಉತ್ಪನ್ನಗಳ ಬೆಲೆ ಶೇ 5.6ರಿಂದ ಶೇ 6.82ಕ್ಕೆ ಜಿಗಿತ ಕಂಡಿದೆ.
ಇತ್ತೀಚೆಗೆ ಕೆಲವು ರಾಜ್ಯಗಳಲ್ಲಿ ಉಂಟಾದ ನೆರೆ ಪ್ರವಾಹ, ತರಕಾರಿ ಬೆಲೆಗಳ ಏರಿಕೆ ಮತ್ತು ಖಾರಿಫ್ ಬಿತ್ತನೆಯ ವಿಳಂಬ ದಂತಹ ಅಂಶಗಳು ಆಹಾರಗಳ ಬೆಲೆಯ ಮೇಲೆ ಪ್ರಭಾವ ಬೀರಿವೆ. ಪ್ರಸ್ತುತ ಹಣದುಬ್ಬರದ ಪ್ರವೃತ್ತಿಯು ಅಕ್ಟೋಬರ್ನಲ್ಲಿ ನಡೆಯಲಿರುವ ವಿತ್ತೀಯ ನೀತಿ ಪರಾಮರ್ಶೆ ಸಭೆಯಲ್ಲಿ ರೆಪೋ ದರ ಏರಿಕೆಗೆ ಹಾದಿ ಮಾಡಿಕೊಡಲಿದೆ ಎಂದು ಆರ್ಥಿಕ ತಜ್ಞ ಆದಿತಿ ನಾಯರ್ ಅಭಿಪ್ರಾಯಪಟ್ಟಿದ್ದಾರೆ.