ನವದೆಹಲಿ: ಕೊರೊನಾ ವೈರಸ್ ಬಿಕ್ಕಟ್ಟು ಮತ್ತು ಲಾಕ್‌ಡೌನ್ ದೇಶಿ ಆರ್ಥಿಕತೆಯ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ. ರೆಸ್ಟೋರೆಂಟ್, ಆಟೋಮೊಬೈಲ್ ಮತ್ತು ರಿಯಲ್ ಎಸ್ಟೇಟ್ ಸೇರಿದಂತೆ ಇತರ ಉದ್ಯಮಗಳು ಇದರಿಂದ ಚೇತರಿಸಿಕೊಳ್ಳಲು ಸುಮಾರು 12 ರಿಂದ 24 ತಿಂಗಳು ತೆಗೆದುಕೊಳ್ಳಬಹುದು.
ಭಾರತೀಯ ವಾಣಿಜ್ಯೋದ್ಯಮ ಮಹಾಸಂಘಗಳ ಒಕ್ಕೂಟ (ಫಿಕ್ಕಿ), 'ಕೋವಿಡ್ 19 ಭಾರತ; ಆರ್ಥಿಕತೆಯ ಪ್ರಭಾವ ಮತ್ತು ತಗ್ಗಿಸುವಿಕೆ' ಶೀರ್ಷಿಕೆ ಮೇಲೆ ನಡೆಸಿದ ಸಮೀಕ್ಷೆಯಲ್ಲಿ ತಿಳಿದುಬಂದಿದೆ. ಸಾರಿಗೆ, ಪ್ರವಾಸೋದ್ಯಮ, ಲಾಜಿಸ್ಟಿಕ್ಸ್, ಮನರಂಜನೆ ಮತ್ತು ಗ್ರಾಹಕ ಬಾಳಿಕೆ ಸೇರಿದಂತೆ ಇತರ ವಲಯಗಳು ಪುನರುಜ್ಜೀವನಗೊಳ್ಳಲು ಇಷ್ಟೇ ಸಮಯ ತೆಗೆದುಕೊಳ್ಳುತ್ತವೆ ಎಂದಿದೆ.
ಜವಳಿ, ಸೌಂದರ್ಯ ಉತ್ಪನ್ನ, ಪಾನೀಯ, ಮದ್ಯ ಪಾನೀಯ, ವಿಮೆ, ಕೃಷಿ, ರಾಸಾಯನಿಕ, ಉಕ್ಕು, ಗಣಿಗಾರಿಕೆ, ಸೇವೆ ವಲಯ, ಕೈಗಾರಿಕೆಗಳು, ಮಳಿಗೆ ಚಿಲ್ಲರೆ ವ್ಯಾಪಾರ ಮತ್ತು ಆರೋಗ್ಯ ಕ್ಷೇತ್ರಗಳು 9-12 ತಿಂಗಳಲ್ಲಿ ಚೇತರಿಸಿಕೊಳ್ಳುವ ಸಾಧ್ಯತೆಯಿದೆ ಎಂದು ಅಭಿಪ್ರಾಯಟ್ಟಿದೆ.
ಭಾರತೀಯ ಉದ್ಯಮವು 9 ರಿಂದ 10 ಲಕ್ಷ ಕೋಟಿ ರೂ.ಯಷ್ಟು ತುರ್ತು ಉತ್ತೇಜನ ಪ್ಯಾಕೇಜ್ ಅಗತ್ಯವಿದೆ. ಇದು ದೇಶದ ಜಿಡಿಪಿಯ ಶೇ 4-5ರಷ್ಟಿದೆ. ಇತರ ದೇಶಗಳು ಸಹ ಇದೇ ರೀತಿಯ ಕ್ರಮಗಳನ್ನು ಕೈಗೊಂಡಿವೆ. ಭಾರತದ ಸಾಲದಿಂದ ಜಿಡಿಪಿ ಅನುಪಾತ ನಿರ್ವಹಿಸಬಹುದಾಗಿದೆ ಎಂದು ವರದಿಯಲ್ಲಿ ಹೇಳಿದೆ.
ಆಹಾರ ಚಿಲ್ಲರೆ ವ್ಯಾಪಾರ, ದೂರಸಂಪರ್ಕ, ಯುಟಿಲಿಟಿ ಸೇವೆಗಳು ಮತ್ತು ಔಷಧಗಳಂತಹ ಸೇವೆಗಳು ಅಲ್ಪಾವಧಿಯಲ್ಲಿ ಉತ್ತೇಜನ ಕಾಣಲಿವೆ. ಸುಮಾರು 6-9 ತಿಂಗಳುಗಳಲ್ಲಿ ದೀರ್ಘಾವಧಿಯಲ್ಲಿ ಸ್ಥಿರವಾಗಿ ಮುಂದುವರಿಯಲ್ಲಿವೆ ಎಂದಿದೆ.