ನವದೆಹಲಿ: ಸಾಲ ಮರುಪಾವತಿಯ ಮೇಲಿನ ನಿಷೇಧ ವಿಸ್ತರಿಸಲು ಅಥವಾ ಸಾಲ ಪುನರ್ ರಚನೆಗೆ ತಮ್ಮ ಸಚಿವಾಲಯವು ಭಾರತೀಯ ರಿಸರ್ವ್ ಬ್ಯಾಂಕ್ ಜತೆಗೆ ಕಾರ್ಯನಿರತವಾಗಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಸಾಲ ಮರುಪಾವತಿ ಮುಂದೂಡಿಕೆ ವಿಸ್ತರಿಸುವುದು ಅಥವಾ ಪುನರ್ರಚಿಸುವುದರ ಕುರಿತು ಆತಿಥ್ಯ ಕ್ಷೇತ್ರದ (ಹಾಸ್ಪಿಟಾಲಿಟಿ) ಅವಶ್ಯಕತೆಗಳನ್ನು ನಾನು ಸಂಪೂರ್ಣವಾಗಿ ಅರ್ಥಮಾಡಿಕೊಂಡಿದ್ದೇನೆ. ಈ ಕುರಿತು ನಾವು ಆರ್‌ಬಿಐ ಜೊತೆ ಕೆಲಸ ಮಾಡುತ್ತಿದ್ದೇವೆ ಎಂದು ವಾಣಿಜ್ಯ ಒಕ್ಕೂಟ ಫಿಕ್ಕಿ ಸದಸ್ಯರನ್ನು ಉದ್ದೇಶಿಸಿ ಹೇಳಿದರು.
ಸಾಲ ಪುನರ್ರಚನೆಯತ್ತ ಗಮನ ಹರಿಸಲಾಗಿದೆ. ಹಣಕಾಸು ಸಚಿವಾಲಯವು ಈ ಬಗ್ಗೆ ಆರ್‌ಬಿಐನೊಂದಿಗೆ ಸಕ್ರಿಯವಾಗಿ ತೊಡಗಿಸಿಕೊಂಡಿದೆ. ತಾತ್ವಿಕವಾಗಿ ಪುನರ್ರಚನೆ ಅಗತ್ಯವಿರಬಹುದೆಂಬ ಕಲ್ಪನೆಯನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲಾಗಿದೆ ಎಂದು ಸೀತಾರಾಮನ್ ಹೇಳಿದರು.
ಅಭಿವೃದ್ಧಿಯ ಹಣಕಾಸು ಸಂಸ್ಥೆ ಸ್ಥಾಪಿಸುವಂತಹ ಕೆಲಸ ಪ್ರಗತಿಯಲ್ಲಿದೆ. ಇದು ಯಾವ ಆಕಾರ ತೆಗೆದುಕೊಳ್ಳುತ್ತದೆ ಎಂಬುದು ಶೀಘ್ರದಲ್ಲೇ ನಮಗೆ ತಿಳಿಯಲಿದೆ ಎಂದು ಅವರು ಹೇಳಿದರು.
ಅವಧಿ ಸಾಲಗಳ ಮೇಲಿನ ಇಂಎಂಐ ಮರುಪಾವತಿ ಅವಧಿಯನ್ನು ಆಗಸ್ಟ್ ದಿನಾಂಕ ಮೀರಿ ಮತ್ತೆ ವಿಸ್ತರಿಸದಂತೆ ಹೆಚ್‌ಡಿಎಫ್‌ಸಿ ಅಧ್ಯಕ್ಷ ದೀಪಕ್ ಪರೇಖ್, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಗವರ್ನರ್ ಶಕ್ತಿಕಾಂತ ದಾಸ್ ಅವರಿಗೆ ಮನವಿ ಮಾಡಿದ್ದರು. ಆದರೆ, ವಿತ್ತ ಸಚಿವೆ ಅವಧಿ ಮುಂದೂಡಿಕೆಯ ಬಗ್ಗೆ ಮಾತನಾಡುತ್ತಿದ್ದಾರೆ.