ಮುಂಬೈ: ಕೊರೊನಾ ವೈರಸ್ ಸೋಂಕಿನಿಂದ ದೇಶಿ ಆರ್ಥಿಕತೆ ಕುಸಿಯುತ್ತಿದ್ದು, ಈಗಾಗಲೇ ಭಾರತೀಯ ರಿಸರ್ವ್ ಬ್ಯಾಂಕ್ ಹಲವು ಉತ್ತೇಜನ ಹಾಗೂ ವಹಿವಾಟಿನ ವಿನಾಯತಿಗಳನ್ನು ನೀಡಿದೆ. ಈಗ ಮತ್ತೊಂದು ಸುತ್ತಿನ ಆರ್ಥಿಕ ಆಸರೆ ಒದಗಿಸಲು ಆರ್ಬಿಐ ಮುಂದಾಗಿದೆ.
ಸಾಗರೋತ್ತರ ರಫ್ತು ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ ಉದ್ಯಮಿಗಳಿಗೆ ವಿದೇಶಿ ಗ್ರಾಹಕರಿಗೆ ಪೂರೈಸಿದ ಸರಕುಗಳಿಗೆ ಹಣ ಪಡೆದುಕೊಳ್ಳಲು ಇದ್ದ ಸಮಯದ ಮಿತಿಯನ್ನು ಈಗಿನ 9 ತಿಂಗಳ ಅವಧಿಯನ್ನು 15 ತಿಂಗಳಿಗೆ ವಿಸ್ತರಿಸಿದೆ.
ಕೇಂದ್ರಾಡಳಿತ ಪ್ರದೇಶಗಳು ಹಾಗೂ ರಾಜ್ಯಗಳ ಮುಂಗಡ ಸ್ವೀಕಾರ ಮಿತಿಯನ್ನು ಶೇ. 30ರಷ್ಟು ಏರಿಕೆ ಮಾಡಿದೆ. ಈ ನಿಯಮ ಸೆಪ್ಟೆಂಬರ್ 30ರ ತನಕ ಜಾರಿಯಲ್ಲಿರುತ್ತದೆ. ಬೇರೆ ಸಂದರ್ಭಗಳಲ್ಲಿ ಉಂಟಾಗಬಹುದಾದದ ನಷ್ಟಗಳನ್ನು ತುಂಬಿಕೊಳ್ಳಲು ಬ್ಯಾಂಕ್ಗಳು ಮೀಸಲಿಡು ಕ್ಯಾಪಿಟಲ್ ಫಂಡ್ ನಿಯಮಗಳನ್ನು ಸಡಿಲಿಸಲಾಗಿದೆ ಎಂದು ಆರ್ಬಿಐ ಹೇಳಿದೆ.
ಕೋವಿಡ್ ಸೋಂಕು ಹರಡುವುದನ್ನು ತಡೆಯಲು ನಿರ್ಬಂಧ ವಿಧಿಸಿದ್ದು, ರಾಜ್ಯ ಸರ್ಕಾರಗಳ ಆದಾಯದಲ್ಲಿ ಕೊರತೆಯಾಗಲಿದೆ. ಹೀಗಾಗಿ ಆರ್ಬಿಐ ನೀಡುವ ಮುಂಗಡಗಳ ಪ್ರಮಾಣವನ್ನು ಶೇ. 30ರಷ್ಟು ಹೆಚ್ಚಿಸಲು ತೀರ್ಮಾನಿಸಿದೆ.