ನವದೆಹಲಿ: ಆರೋಗ್ಯ, ಆರ್ಥಿಕತೆ ಮತ್ತು ಕಾರ್ಮಿಕ ಸುಧಾರಣೆಗೆ ಸಂಬಂಧಿತ ವಿಷಯಗಳ ಬಗ್ಗೆ ಫೆಬ್ರವರಿ 20ರಂದು ಪ್ರಧಾನಿ ನರೇಂದ್ರ ಮೋದಿ ಅವರು ನೀತಿ ಆಯೋಗ ಆಡಳಿತ ಮಂಡಳಿ ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಉನ್ನತ ಸಂಸ್ಥೆ ನೀತಿ ಆಯೋಗ ಮಂಡಳಿಯು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು, ಕೇಂದ್ರಾಡಳಿತ ಪ್ರದೇಶಗಳ ಗವರ್ನರ್, ಹಲವು ಕೇಂದ್ರ ಸಚಿವರು ಮತ್ತು ಸರ್ಕಾರಿ ಹಿರಿಯ ಅಧಿಕಾರಿಗಳನ್ನು ಒಳಗೊಂಡಿದೆ. ಪ್ರಧಾನಿ ಮೋದಿ ಅವರು ನೀತಿ ಆಯೋಗದ ಅಧ್ಯಕ್ಷರಾಗಿದ್ದಾರೆ.
ಇದನ್ನೂ ಓದಿ: ಬೆಳ್ಳಿ ಬೆಲೆಯಲ್ಲಿ 6,024 ರೂ. ಇಳಿಕೆ: ಗೋಲ್ಡ್ ರೇಟ್ನಲ್ಲಿ ಕುಸಿತ
ಕೋವಿಡ್-19 ವ್ಯಾಕ್ಸಿನೇಷನ್, ಕಾರ್ಮಿಕ ಸುಧಾರಣೆಗಳು ಮತ್ತು ಆರ್ಥಿಕತೆಯ ಸ್ಥಿತಿ ಸೇರಿದಂತೆ ಆರೋಗ್ಯಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ಸಭೆಯಲ್ಲಿ ಚರ್ಚೆಗೆ ಬರಲಿವೆ ಎಂದು ಮೂಲಗಳು ತಿಳಿಸಿವೆ.
ಹಿಂದಿನ ಸಭೆಗಳ ಕಾರ್ಯಸೂಚಿ ಬಗ್ಗೆ ತೆಗೆದುಕೊಂಡ ಕ್ರಮವನ್ನು ಆಡಳಿತ ಮಂಡಳಿ ಪರಿಶೀಲಿಸುತ್ತದೆ ಮತ್ತು ಭವಿಷ್ಯದ ಅಭಿವೃದ್ಧಿ ಆದ್ಯತೆಗಳ ಬಗ್ಗೆ ಪ್ರಸ್ತಾಪಿಸಲಿದೆ. ಆಡಳಿತ ಮಂಡಳಿಯು ನಿಯಮಿತವಾಗಿ ಸಭೆ ಸೇರುತ್ತದೆ. ಅದರ ಮೊದಲ ಸಭೆ 2015ರ ಫೆಬ್ರವರಿ 8ರಂದು ನಡೆದಿತ್ತು. ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ, ಆಡಳಿತ ಮಂಡಳಿ ಕಳೆದ ವರ್ಷ ಸಭೆ ಸೇರಲಿಲ್ಲ.