ನವದೆಹಲಿ: ದಶಕದ ಬಳಿಕ ಅತ್ಯಧಿಕ ನಿರುದ್ಯೋಗದ ಪ್ರಮಾಣದ ಹೊರತಾಗಿಯೂ ಬಾಲಾಕೋಟ್ ಮೇಲೆ ಏರ್ಸ್ಟ್ರೈಕ್, ಹಿಂದುತ್ವದಂತಹ ಭಾವನಾತ್ಮಕ ವಿಚಾರಗಳ ಮೂಲಕ ಮತದಾರರ ಮನ ಸೆಳೆಯುವಲ್ಲಿ ಯಶಸ್ವಿಯಾಗಿ ಎರಡನೇ ಅವಧಿಗೆ ಅಧಿಕಾರದ ಗದ್ದುಗೆ ಏರಲಿರುವ ನಿಯೋಜಿತ ಪ್ರಧಾನಿ ನರೇಂದ್ರ ಮೋದಿಗೆ ವಿದೇಶಾಂಗ ನೀತಿಯಲ್ಲಿ ಕಠಿಣ ಸವಾಲುಗಳು ಎದುರಾಗಲಿವೆ.
ಗುರುವಾರದಂದು ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಅಮೆರಿಕ ಮತ್ತು ಚೀನಾ ನಡುವಿನ ವ್ಯಾಪಾರ ಸಮರದಿಂದ ಉದ್ಭವಿಸಬಹುದಾದ ಸಮಸ್ಯೆಗಳು ಹಾಗೂ ಇರಾನ್ ಮೇಲೆ ಅಮೆರಿಕ ಹೇರಿರುವ ಆರ್ಥಿಕ ದಿಗ್ಬಂಧನ ನಿರ್ವಹಣೆ ಕುರಿತು ಮುಖ್ಯವಾಗಿ ಚಿಂತಿಸಬೇಕಿದೆ.
ವೇಗದ ಆರ್ಥಿಕ ಬೆಳವಣಿಗೆ ಹೊಂದಿರುವ ಭಾರತ, ಅಗ್ಗದ ದರದಲ್ಲಿ ಕಚ್ಚಾ ತೈಲ ಆಮದು ಮಾಡಿಕೊಳ್ಳುವತ್ತ ದೃಷ್ಟಿ ಹರಿಸಬೇಕಿದೆ. ಜೊತೆಗೆ ದಕ್ಷಿಣ ಏಷ್ಯಾ ರಾಷ್ಟ್ರಗಳ ಸಾಲಿನಲ್ಲಿ ತನ್ನ ಸಾಂಪ್ರದಾಯಿಕ ನಾಯಕತ್ವ ರಕ್ಷಿಸಿಕೊಳ್ಳುವ ಒತ್ತಡದ ಸವಾಲು ಎದುರಿಸಲಿದೆ.
ಮೋದಿ ಮತ್ತೆ ಅಧಿಕಾರಕ್ಕೆ ಬರುತ್ತಿದ್ದಂತೆ ವಿಶ್ವದ ಮುಂಚೂಣಿ ನಾಯಕರು ಶುಭ ಕೋರಿ, ಮೋದಿಯೊಂದಿಗೆ ಈ ಹಿಂದಿನ ಒಡಂಬಡಿಕೆಯಂತೆ ಸಾಗುವುದಾಗಿ ಭರವಸೆ ನೀಡಿದ್ದಾರೆ.
ಈ ಹಿಂದಿನ ಆಡಳಿತದಲ್ಲಿ ಮೋದಿಯ ವಿದೇಶಾಂಗ ನೀತಿಗಳು ಉಚ್ಛ್ರಾಯ ಸ್ಥಿತಿಯಲ್ಲಿದ್ದವು. ಇಂತಹ ನೀತಿಗಳು ಈ ಹಿಂದಿನ ಯಾವುದೇ ಪ್ರಧಾನಿಗಳ ಆಡಳಿತದಲ್ಲಿ ಕಂಡಿರಲಿಲ್ಲ ಎಂದು ವಾಷಿಂಗ್ಟನ್ನ ಮಾಜಿ ವಿದೇಶಾಂಗ ರಾಯಭಾರಿ ಒಬ್ಬರು ಅಭಿಪ್ರಾಯಪಟ್ಟಿದ್ದಾರೆ. ಇಂತಹ ಅಭಿಮತಗಳು ಮುಂದಿನ ದಿನಗಳಲ್ಲಿ ಬರಲಿವೆ ಎಂಬುದನ್ನು ನಿರೀಕ್ಷಿಸುವುದು ಕಷ್ಟ- ಸಾಧ್ಯ.
'ಮತ್ತೆ ಅಧಿಕಾರಕ್ಕೆ ಬಂದ ಮೋದಿ, ಭಾರತಕ್ಕೆ ಹೊರೆಯಾಗಲಿರುವ ಬಹುದೊಡ್ಡ ಸವಾಲಿನ ಜವಾಬ್ದಾರಿಗಳನ್ನು ಹೇಗೆ ನಿರ್ವಹಿಸುತ್ತಾರೆ ಎಂಬುದನ್ನು ಜಾಗತಿಕ ನಾಯಕರು ಕಾತುರರಾಗಿದ್ದಾರೆ. ಇಂಡೋ- ಪೆಸಿಫಿಕ್ ರಕ್ಷಣೆ, ಮುಕ್ತ ಮಾರುಕಟ್ಟೆ, ಹವಾಮಾನ ವೈಪರೀತ್ಯ, ದೇಶದ ಆಂತರಿಕ ವಿಷಯಗಳು ಸೇರಿದಂತೆ ಹಲವು ತೊಂದರೆಗಳು ಬರಲಿವೆ' ಎಂದು ಆರ್ಥಿಕ ತಜ್ಞರು ವಿಶ್ಲೇಷಿಸಿದ್ದಾರೆ.
ಪ್ರಸಕ್ತ ಅಂತಾರಾಷ್ಟ್ರೀಯ ಸನ್ನಿವೇಶದಲ್ಲಿ ಮೋದಿಗೆ ಸಾಕಷ್ಟು ಸವಾಲಾಗಳು ಎದುರಾಗಲಿವೆ ಭಾರತದ ನಿವೃತ್ತ ರಾಯಭಾರಿ ಒಬ್ಬರು ಎಚ್ಚರಿಸಿದ್ದಾರೆ.
ಚೀನಾದೊಂದಿಗೆ ವಾಣಿಜ್ಯ ಸಮರಕ್ಕೆ ಇಳಿದಿರುವ ಅಮೆರಿಕ, ಏಷ್ಯಾದಲ್ಲಿ ಅದರ ಪ್ರಾಬಲ್ಯ ಕ್ಷೀಣಿಸುವಂತೆ ಮಾಡಲು ಭಾರತವನ್ನು ಅಸ್ತ್ರವಾಗಿ ಬಳಸಿಕೊಳ್ಳಲಿದೆ. ಮೋದಿ ಕೂಡ ಡ್ರ್ಯಾಗನ್ ಜತೆಗೆ ವಹಿವಾಟು ಕಡಿಮೆಗೊಳಿಸುವ ಇಂಗಿತ ಹೊಂದಿದ್ದಾರೆ. ಇದಕ್ಕೆ ಯಾವ ರೀತಿಯ ವಾಣಿಜ್ಯ ತಂತ್ರಗಾರಿಕೆ ರಚಿಸುತ್ತಾರೋ ಇನ್ನೂ ಸ್ಪಷ್ಟತೆ ಸಿಕ್ಕಿಲ್ಲ.
ಭಾರತವು ಅಮೆರಿಕದ ಸರಕುಗಳಿಗೆ ಹೆಚ್ಚಿನ ಸುಂಕ ಹೇರುತ್ತಿದೆ ಎಂದು ಅಧ್ಯಕ್ಷ ಟ್ರಂಪ್ ಆರೋಪ ಮಾಡಿಕೊಂಡು ಬರುತ್ತಿದ್ದು, ವ್ಯಾಪಾರದ ಅಸಮತೋಲನ ಕಡಿಮೆ ಮಾಡುವಂತೆ ಒತ್ತಡ ಹೇರುತ್ತಿದ್ದಾರೆ. ಭಾರತ ಈಗಾಗಲೇ ರಕ್ಷಣೆಗೆ ಸಂಬಂಧಿಸಿದಂತೆ 15 ಶತಕೋಟಿ ಡಾಲರ್ ಒಪ್ಪಂದಕ್ಕೆ ಅಮೆರಿಕದೊಂದಿಗೆ ಸಹಿ ಹಾಕಿದೆ. ಇದನ್ನು ಯಥಾವತ್ತಾಗಿ ಮುಂದುವರಿಸಿಕೊಂಡು ಹೋಗಬೇಕಾದ ಅನಿವಾರ್ಯತೆ ಮೋದಿಗೆ ಇದೆ.
ವಿಶ್ವ ಆರ್ಥಿಕ ವೇದಿಕೆಯ ಪ್ರಕಾರ, ವಿಶ್ವದ ಮೂರನೇ ಅತಿದೊಡ್ಡ ಗ್ರಾಹಕ ಮಾರುಕಟ್ಟೆ ರಾಷ್ಟ್ರ ಭಾರತ ಎಂಬುದು ಖಾತರಿಯಾಗಿದೆ. ಈ ವರ್ಷ 1.5 ಟ್ರಿಲಿಯನ್ ಡಾಲರ್ (ಅಂದಾಜು ₹ 41.80 ಲಕ್ಷ ಕೋಟಿ) ಮಾರುಕಟ್ಟೆಯು 2030ರ ವೇಳೆಗೆ 6 ಟ್ರಿಲಿಯನ್ ಡಾಲರ್ಗೆ (ಅಂದಾಜು ₹ 10.45 ಲಕ್ಷ ಕೋಟಿ) ಏರಿಕೆ ಆಗಲಿದೆ. ಈ ಎಲ್ಲ ಜಟಿಲ ಸವಾಲುಗಳನ್ನು ಮೋದಿ ನೇತೃತ್ವದ 2.0 ಸರ್ಕಾರ ಎದುರಿಸಬೇಕಿದೆ.