ನವದೆಹಲಿ: ಇತ್ತ ಕೊರೊನಾ ವೈರಸ್ ಸೋಂಕು ಹೆಚ್ಚುತ್ತಿದ್ದರೇ ಅತ್ತ ಇಂಧನದ ಬೇಡಿಕೆ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ. ಪೆಟ್ರೋಲ್ ಮಾರಾಟವು ಹತ್ತನೇ ಒಂದು ಭಾಗಕ್ಕಿಂತ ಕಡಿಮೆಯಾಗಿದೆ. ನಿತ್ಯದ ನಿರ್ವಹಣೆ ನೌಕರರ ವೇತನಕ್ಕೂ ಸಾಲುತ್ತಿಲ್ಲ ಎಂದು ಪೆಟ್ರೋಲ್ ಬಂಕ್ ಆಪರೇಟ್ಗಳು ಅಲವತ್ತುಕೊಳ್ಳುತ್ತಿದ್ದಾರೆ.
ದೇಶದ ಸುಮಾರು 64,000 ಪೆಟ್ರೋಲ್ ಪಂಪ್ ಆಪರೇಟರ್‌ಗಳನ್ನು ಪ್ರತಿನಿಧಿಸುವ ಅಖಿಲ ಭಾರತ ಪೆಟ್ರೋಲಿಯಂ ಮಾರಾಟಗಾರರ ಸಂಘ (ಎಐಪಿಡಿಎ), 'ವ್ಯವಹಾರ ನಡೆಸಲು ನೆರವಾಗಲು ಕೇಂದ್ರ ಸರ್ಕಾರ ತೈಲ ಕಂಪನಿಗಳಿಂದ ಆರ್ಥಿಕ ಪರಿಹಾರ ಪ್ಯಾಕೇಜ್ ಕೊಡಿಸಬೇಕು' ಎಂಬ ಬೇಡಿಕೆ ಇಟ್ಟಿದ್ದಾರೆ.
ಕೊರೊನಾ ವೈರಸ್ ಹರಡುವುದನ್ನು ತಪ್ಪಿಸಲು ರಾಷ್ಟ್ರದಾದ್ಯಂತ ಲಾಕ್ಡೌನ್ ವಿಧಿಸಲಾಗಿದೆ. ಬಹುತೇಕ ವಾಹನಗಳು ರಸ್ತೆಗೆ ಇಳಿಯುತ್ತಿಲ್ಲ. ರಾಷ್ಟ್ರೀಯವಾಗಿ ಪ್ರತಿ ತಿಂಗಳ ಚಿಲ್ಲರೆ ಇಂಧನ ಮಾರಾಟ 170 ಕಿಲೋಲೀಟರ್‌ಗಳಿಂದ ಈಗ 15 ಕಿಲೋಮೀಟರ್‌ಗೆ ಇಳಿದಿದೆ ಎಂದು ಎಐಪಿಡಿಎ ಅಧ್ಯಕ್ಷ ಅಜಯ್ ಬನ್ಸಾಲ್ ಅವರು ಮೂರು ಸರ್ಕಾರಿ ಸ್ವಾಮ್ಯದ ತೈಲ ಸಂಸ್ಥೆಗಳ ಮಾರ್ಕೆಟಿಂಗ್ ಮುಖ್ಯಸ್ಥರಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಕಡಿಮೆ ಸಿಬ್ಬಂದಿಯೊಂದಿಗೆ ಕಾರ್ಯನಿರ್ವಹಿಸುತ್ತಿದ್ದರೂ ಪೆಟ್ರೋಲ್ ಪಂಪ್‌ಗಳು ಪಾವತಿಸಲು ನಿಗದಿತ ಶುಲ್ಕಗಳನ್ನು ವಿಧಿಸಬೇಕಾಗುತ್ತದೆ. ಎಲೆಕ್ಟ್ರಿಕ್ ಮೀಟರ್ ಶುಲ್ಕ, ಸಿಬ್ಬಂದಿ ಸಂಬಳ, ಬ್ಯಾಂಕ್ ಶುಲ್ಕ, ಸ್ಟ್ಯಾಂಪಿಂಗ್ ಶುಲ್ಕದಂತಹ ಇತ್ಯಾದಿ ಪಾವತಿಗಳಿವೆ. ಮಾರಾಟ ಕಡಿತದಿಂದ ವಿತರಕರಿಗೆ ಭಾರಿ ನಷ್ಟವನ್ನುಂಟು ಮಾಡುತ್ತಿದೆ ಎಂದು ತಿಳಿಸಿದೆ.