ನವದೆಹಲಿ: ಕೊರೊನಾ ವೈರಸ್ ತಂದಿಟ್ಟ ಆರೋಗ್ಯ ಬಿಕ್ಕಟ್ಟಿನ ವಿರುದ್ಧ ಹೋರಾಡುವ ಭಾರತದ ಸಾಮರ್ಥ್ಯದ ಬಗ್ಗೆ ಗ್ರಾಹಕರ ನಂಬಿಕೆ ಹೆಚ್ಚಾಗಿದೆ. ಆದರೆ, ಆರ್ಥಿಕತೆಯ ಮೇಲಿನ ನಂಬಿಕೆ ಕಳೆದುಕೊಂಡಿದ್ದಾರೆ ಎಂದು ಟಿಆರ್‌ಎ ಸಮೀಕ್ಷೆ ತಿಳಿಸಿದೆ.
ಬಿಕ್ಕಟ್ಟು ಎದುರಿಸುವ ಭಾರತದ ಆರೋಗ್ಯ ಸಾಮರ್ಥ್ಯದ ಮೇಲೆ ಗ್ರಾಹಕರ ನಂಬಿಕೆ ಗಣನೀಯವಾಗಿ ಹೆಚ್ಚಾಗಿದ್ದು, ಇದು ಶೇ 73ರಷ್ಟಿದೆ. ಆದರೆ, ಬಿಕ್ಕಟ್ಟನ್ನು ಎದುರಿಸುವ ಭಾರತದ ಆರ್ಥಿಕ ಸಾಮರ್ಥ್ಯದ ಮೇಲಿನ ಅವರ ನಂಬಿಕೆ ಶೇ 63ರಷ್ಟಿದೆ. ಇದು ಗ್ರಾಹಕರಲ್ಲಿನ ಭಯದ ಪ್ರತಿಬಿಂಬವಾಗಿದೆ ಎಂದು ಟಿಆರ್‌ಎ 'ಕೊರೊನಾ ವೈರಸ್ ಗ್ರಾಹಕ ಒಳನೋಟಗಳು 2020' ಎಂಬ ಹೆಸರಿನಡಿ ಸಮೀಕ್ಷೆಯಿಂದ ತಿಳಿದುಬಂದಿದೆ.
ಆಶ್ಚರ್ಯಕರ ಸಂಗತಿಯೆಂದರೆ ಭಾರತೀಯರಲ್ಲಿ ಆರೋಗ್ಯ ಬಿಕ್ಕಟ್ಟಿನ ಚೇತರಿಕೆ ಗ್ರಹಿಕೆ ಹೆಚ್ಚಿದ್ದರೇ ಆರ್ಥಿಕ ಚೇತರಿಕೆಯ ಗ್ರಹಿಕೆ ಶೇ 10ರಷ್ಟು ಕಡಿಮೆಯಾಗಿದೆ. ಸರ್ಕಾರದಿಂದ ವ್ಯವಹಾರಗಳಿಗೆ ಸಾಕಷ್ಟು ನೇರ ಹಣಕಾಸಿನ ನೆರವು ನೀಡದ ಹೊರತು, ಆರ್ಥಿಕತೆಯ ಭವಿಷ್ಯವು ದುರ್ಬಲವಾಗಿ ಎಂದು ಟಿಆರ್‌ಎ ಸಿಇಒ ಎನ್. ಚಂದ್ರಮೌಳಿ ಹೇಳಿದರು.
ದೇಶವ್ಯಾಪಿ ಲಾಕ್‌ಡೌನ್‌ನಿಂದಾಗಿ ಭಾರತೀಯರು ತಮ್ಮ ಸುತ್ತಲಿನ ಪರಿಸರ ಭವಿಷ್ಯದ ಬಗ್ಗೆ ಅಸುರಕ್ಷಿತ ಭಾವನೆ ಹೊಂದಿದ್ದಾರೆ. ಏಕೆಂದರೆ, ಇದು ಯಾವಾಗ ಕೊನೆಗೊಳ್ಳುತ್ತದೆ, ಇದು ಮುಗಿದ ನಂತರ ವ್ಯವಹಾರಗಳು ಹೇಗೆ ನಿಭಾಯಿಸುತ್ತವೆ ಎಂಬುದರ ಬಗ್ಗೆ ಖಚಿತತೆ ಇಲ್ಲ ಎಂದು ಸಮೀಕ್ಷೆಯಲ್ಲಿ ಉಲ್ಲೇಖವಾಗಿದೆ.