ನವದೆಹಲಿ: ಉದ್ಯೋಗಿಗಳಿಗೆ ಪಾವತಿ ವಿಳಂಬದಂಥ ಸಮಸ್ಯೆಗಳನ್ನು ಪರಿಹರಿಸುವುದರ ಜೊತೆಗೆ ಪ್ರತಿ ಕಾರ್ಮಿಕರಿಗೆ ಕನಿಷ್ಠ ವೇತನ ನಿಗದಿ ಮಾಡುವ ನೂತನ ವಿಧೇಯಕ ಸಂಸತ್ತಿನಲ್ಲಿ ಶುಕ್ರವಾರ ಅಂಗೀಕಾರವಾಗಿದೆ.
ಮಸೂದೆ ಅಂಗೀಕಾರಗೊಂಡ ಬಳಿಕ ಮಾತನಾಡಿದ ಕಾರ್ಮಿಕ ಸಚಿವ ಸಂತೋಷ್ ಕುಮಾರ್ ಗಂಗ್ವಾರ್ ಅವರು, ನೂತನ ಮಸೂದೆಯಿಂದ ದೇಶದ ಸುಮಾರು 50 ಕೋಟಿ ಕಾರ್ಮಿಕರಿಗೆ ಲಾಭವಾಗಲಿದೆ. ಪ್ರತಿಯೊಬ್ಬ ಕಾರ್ಮಿಕನೂ ಗೌರವಾನ್ವಿತ ಜೀವನವನ್ನು ಹೊಂದಿರಬೇಕು. ಇದಕ್ಕಾಗಿ ಐತಿಹಾಸಿಕ ಮಸೂದೆ ಜಾರಿಗೆ ತರಲಾಗಿದೆ ಎಂದು ಹೇಳಿದರು.
ವೇತನಗಳ ಸಂಹಿತೆ ಮಸೂದೆ, 2019, ಬೋನಸ್ ಮತ್ತು ಅದಕ್ಕೆ ಸಂಬಂಧಿಸಿದ ವಿಷಯಗಳಿಗೆ ಸಂಬಂಧಿಸಿದ ಕಾನೂನುಗಳನ್ನು ತಿದ್ದುಪಡಿ ಮಾಡಲು ಮತ್ತು ಕ್ರೋಢೀಕರಿಸಲು ಸಹಾಯಕವಾಗಲಿದೆ. ರಾಜ್ಯಸಭೆಯಲ್ಲಿ 85 ಸದಸ್ಯರ ಪರವಾಗಿ ಮತ್ತು 8 ವಿರುದ್ಧವಾಗಿ ಜುಲೈ 30ರಂದು ಲೋಕಸಭೆಯಲ್ಲಿ ಅಂಗೀಕರಿಸಲಾಯಿತು.
ಕನಿಷ್ಠ ವೇತನ ಕಾಯ್ದೆ 1948, ವೇತನ ಪಾವತಿ ಕಾಯ್ದೆ 1936, ಬೋನಸ್ ಪಾವತಿ ಕಾಯ್ದೆ 1965, ಸಮಾನ ಸಂಭಾವನೆ ಕಾಯ್ದೆ 1976ನ್ನು ಈ ನೂತನ ವೇತನ ಸಂಹಿತೆ ವಿಧೇಯಕದಲ್ಲಿ ಸೇರಿಸಲಾಗಿದೆ. ಹೊಸ ಕನಿಷ್ಠ ವೇತನ ವಿಧೇಯಕದಲ್ಲಿನ ಅಧಿನಿಯಮದ ಪ್ರಕಾರ, ಕಾರ್ಮಿಕರಿಗೆ ಪ್ರತಿ ತಿಂಗಳೂ ಕನಿಷ್ಠ ವೇತನ ₹ 18,000 ನೀಡಬೇಕಾಗುತ್ತದೆ.