ಇಸ್ಲಾಮಾಬಾದ್:ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಪಾಕಿಸ್ತಾನ,ಅಂತರಾಷ್ಟ್ರೀಯ ಹಣಕಾಸು ನಿಧಿಯಿಂದ 6 ಬಿಲಿಯನ್ ಡಾಲರ್ ಸಾಲ ಪಡೆಯುವ ಒಪ್ಪಂದಕ್ಕೆ ಸಹಿ ಹಾಕಿದ ಬಳಿಕ ಮತ್ತಷ್ಟು ತೊಂದರೆಯಲ್ಲಿ ಸಿಲುಕಿದೆ.
ಐಎಂಎಫ್ ಜೊತೆ ಸಾಲ ಒಪ್ಪಂದ ಮಾಡಿಕೊಂಡ ನಂತರ ಪಾಕ್ ರೂಪಾಯಿ ಮೌಲ್ಯ ಜಾಗತಿಕ ಮಾರುಕಟ್ಟೆಯಲ್ಲಿ ಸಾರ್ವಕಾಲಿಕ ಕುಸಿತ ದಾಖಲಿಸಿದೆ. ಪ್ರಸ್ತುತ ಪಾಕ್ನ ದೇಶಿ ಮಾರುಕಟ್ಟೆಯು 17 ವರ್ಷಗಳ ಹಿಂದಿನ ಕನಿಷ್ಠ ಮಟ್ಟಕ್ಕೆ ತಲುಪಿದೆ. ರೂಪಾಯಿ ಮೌಲ್ಯ ಕುಸಿದು ಹಾಗೂ ಷೇರುಪೇಟೆಯಲ್ಲಿನ ಇಳಿಕೆಯಿಂದ ಸ್ಥಳೀಯ ಮಾರುಕಟ್ಟೆಗೆ ತೀವ್ರ ಹೊಡೆತ ಬಿದ್ದಿದೆ.
ಗುರುವಾರದ ವಹಿವಾಟಿನಲ್ಲಿ ಪಾಕ್ ರೂಪಾಯಿ ಅಮೆರಿಕ ಡಾಲರ್ ಎದುರು ₹ 146.25ಕ್ಕೆ ಬಂದು ತಲುಪಿದೆ. ಈ ಹಿಂದಿನ ವಾರ ಡಾಲರ್ ಎದುರು ಪಾಕ್ ರೂಪಾಯಿ ವಹಿವಾಟು ₹ 141 ನಡೆಸಿತ್ತು. ಒಂದೇ ವಾರದಲ್ಲಿ ಗಣನೀಯ ಪ್ರಮಾಣದಲ್ಲಿ ಇಳಿಕೆ ಆಗಿದ್ದು, ಪಾಕ್ನ ಆರ್ಥಿಕತೆ ಚಿಂತಾಜನಕವಾಗಿದೆ ಎಂಬುದನ್ನು ಸಾಬೀತುಪಡಿಸುತ್ತಿದೆ. ಇಲ್ಲಿನ ಕೆಎಸ್ಇ ಪೇಟೆ ಗುರುವಾರದ ವಹಿವಾಟಿನಲ್ಲಿ ಶೇ 2.4ರಷ್ಟು ಕುಸಿತ ಕಂಡಿದೆ. ಸತತ ಏಳು ದಿನವೂ ಇಳಿಕೆ ಕಂಡಿದ್ದು, 2001ರಲ್ಲಿ ಇಂತಹ ಮಹಾ ಕುಸಿತ ಸಂಭವಿಸಿತ್ತು. ಈಗ ಮತ್ತೆ ಅಂಥ ಸಂದಿಗ್ಧತೆಗೆ ಪಾಕ್ ತಲುಪಿದೆ.