ಇಸ್ಲಾಮಾಬಾದ್: ಭಾರತೀಯ ಮೂಲದ ಎಲೆಕ್ಟ್ರಾನಿಕ್ ಮೀಡಿಯಾ ಕಂಟೆಂಟ್ ಚಂದಾದಾರಿಕೆಯ ಆನ್‌ಲೈನ್ ಪಾವತಿಗಳನ್ನು ತಕ್ಷಣ ನಿಷೇಧಿಸುವಂತೆ ಪಾಕಿಸ್ತಾನ ಸರ್ಕಾರವು ತನ್ನ ಬ್ಯಾಂಕ್‌ಗಳಿಗೆ ಸೂಚಿಸಿದೆ ಎಂದು ಮಾಧ್ಯಮ ವರದಿ ತಿಳಿಸಿದೆ.
ನವೆಂಬರ್ 9ರಂದು ಕ್ಯಾಬಿನೆಟ್ನಲ್ಲಿ ನಿಷೇಧ ಬಗ್ಗೆ ನಿರ್ಧಾರ ತೆಗೆದುಕೊಂಡಿದೆ ಎಂದು ಡಾನ್ ಪತ್ರಿಕೆ ವರದಿ ಮಾಡಿದೆ. ನವೆಂಬರ್ 13ರ ಒಳಗೆ ದೇಶದ ಕೇಂದ್ರ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಪಾಕಿಸ್ತಾನಕ್ಕೆ ಈ ಕುರಿತು ವರದಿ ಸಲ್ಲಿಸುವಂತೆ ಬ್ಯಾಂಕಿಂಗ್ ಅಧಿಕಾರಿಗಳನ್ನು ಸರ್ಕಾರ ಕೋರಿದೆ.
ಪಾಕಿಸ್ತಾನದ ಸರ್ಕಾರದ ಕ್ಯಾಬಿನೆಟ್ ವಿಭಾಗದ ಪತ್ರವೊಂದನ್ನು ನಾವು ಸ್ವೀಕರಿಸಿದ್ದೇವೆ. ಕ್ರೆಡಿಟ್ ಕಾರ್ಡ್‌ಗಳು ಸೇರಿದಂತೆ ವಿವಿಧ ರೀತಿಯ ಪಾವತಿಗಳನ್ನು ನಿಲ್ಲಿಸುವಂತೆ ನಮಗೆ ಸೂಚನೆ ನೀಡಿದ್ದಾರೆ. ಪಾಕಿಸ್ತಾನದಲ್ಲಿ ಭಾರತೀಯ ಕಂಟೆಂಟ್ ಚಂದಾದಾರರಾಗಲು ಹಲವು ಮೀಡಿಯಾಗಳು ಆಹ್ವಾನ ನೀಡುತ್ತಿವೆ.
ಪಾಕಿಸ್ತಾನದಲ್ಲಿ ಈಗಾಗಲೇ ಭಾರತೀಯ ಕಂಟೆಂಟ್ ನಿಷೇಧಿಸಲಾಗಿದೆ. ಹೊಸ ಸುತ್ತೋಲೆ ಡೈರೆಕ್ಟ್ ಟು ಹೋಮ್ (ಡಿಟಿಎಚ್) ಸೇವೆಗೆ ಆನ್‌ಲೈನ್ ಪಾವತಿ ತಡೆಯೊಡ್ಡಲಿದೆ ಎಂದು ಪಾಕಿಸ್ತಾನ ಎಲೆಕ್ಟ್ರಾನಿಕ್ ಮೀಡಿಯಾ ರೆಗ್ಯುಲೇಟರಿ ಅಥಾರಿಟಿ (ಪೆಮ್ರಾ) ಮಾಜಿ ಅಧ್ಯಕ್ಷ ಅಬ್ಸರ್ ಆಲಂ ಹೇಳಿದ್ದಾರೆ.
ಡಿಟಿಹೆಚ್ ಸೌಲಭ್ಯ ಹೊಂದಿರುವವರು ಹೆಚ್ಚಾಗಿ ಭಾರತೀಯ ಮೀಡಿಯಾಗಳ ಕಂಟೆಂಟ್ ಬಳಸುತ್ತಿದ್ದಾರೆ. ಅವರು ಆನ್‌ಲೈನ್ ಪಾವತಿ ಮಾಡುತ್ತಾರೆ. ಚಂದಾದಾರರು ಪಾಕಿಸ್ತಾನದಿಂದ ನೇರ ಪಾವತಿಸಲು ಸಾಧ್ಯವಿಲ್ಲ. ಆದರೆ ಭಾರತೀಯ ಪೂರೈಕೆದಾರರು ಯುನೈಟೆಡ್ ಅರಬ್ ಎಮಿರೇಟ್ಸ್‌ನಂತಹ ಇತರ ದೇಶಗಳಿಂದ ಪಾವತಿ ಪಡೆಯಬಹುದಾಗಿದೆ.