ನವದೆಹಲಿ : ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಪ್ಯಾಕೇಜ್ (ಪಿಎಂಜಿಕೆಪಿ) ಅಡಿ ಜೂನ್ 19ರವರೆಗೆ 65,454 ಕೋಟಿ ರೂ. ನೇರ ಲಾಭ ವರ್ಗಾವಣೆ (ಡಿಬಿಟಿ) ಮೂಲಕ 42 ಕೋಟಿ ಫಲಾನುಭವಿಗಳಿಗೆ ನಗದು ನೀಡಲಾಗಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.
ಪ್ಯಾಕೇಜ್ ಅಡಿ ಕೇಂದ್ರವು ಮಹಿಳೆಯರು, ಬಡವರು ಮತ್ತು ರೈತರಿಗೆ ಉಚಿತ ಆಹಾರ ಧಾನ್ಯ ಹಾಗೂ ನಗದು ಪಾವತಿ ಘೋಷಿಸಿತು. ಇದರ ತ್ವರಿತ ಅನುಷ್ಠಾನದ ಮೇಲ್ವಿಚಾರಣೆಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಾಡುತ್ತಿವೆ. ಈವರೆಗೆ ಸರ್ಕಾರವು ಪಿಎಂ ಉಜ್ವಲ ಯೋಜನೆ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ 8,488 ಕೋಟಿ ರೂ. ಪಾವತಿಸಿದೆ. ಏಪ್ರಿಲ್ ಮತ್ತು ಮೇ ತಿಂಗಳಲ್ಲಿ 8.52 ಕೋಟಿ ಉಚಿತ ಉಜ್ವಲ ಸಿಲಿಂಡರ್ ಕಾಯ್ದಿರಿಸಿ ವಿತರಿಸಲಾಗಿದೆ.
ಜೂನ್‌ನಲ್ಲಿ ಈವರೆಗೆ 2.1 ಕೋಟಿ ಸಿಲಿಂಡರ್ ಕಾಯ್ದಿರಿಸಿ ಅದರಲ್ಲಿ 1.87 ಕೋಟಿ ಉಚಿತವಾಗಿ ವಿತರಿಸಲಾಗಿದೆ. 65.74 ಲಕ್ಷ ಇಪಿಎಫ್‌ಒ ಖಾತೆದಾರರ ಉದ್ಯೋಗಿಗಳ ಅನುಕೂಲಕ್ಕಾಗಿ ಜೂನ್ 19ರ ವೇಳೆಗೆ ಸರ್ಕಾರವು 996.46 ಕೋಟಿ ರೂ. ಬಿಡುಗಡೆ ಮಾಡಿದೆ ಎಂದು ಸಚಿವಾಲಯದ ಪ್ರಕಟಣೆಯಲ್ಲಿ ತಿಳಿಸಿದೆ. ಇಪಿಎಫ್‌ಒನ 20.22 ಲಕ್ಷ ಸದಸ್ಯರು ತಮ್ಮ ಇಪಿಎಫ್‌ಒ ಖಾತೆಗಳಿಂದ ಮರುಪಾವತಿಸಲಾಗದ ಮುಂಗಡವನ್ನು ಆನ್‌ಲೈನ್‌ನಲ್ಲಿ 5,767 ಕೋಟಿ ರೂ. ಹಿಂಪಡೆದಿದ್ದಾರೆ. ಮೊದಲ ಕಂತಿನ ಪಿಎಂ ಕಿಸಾನ್ ಯೋಜನೆಯಡಿ 8.94 ಕೋಟಿ ರೈತರಿಗೆ 16,394 ಕೋಟಿ ರೂ. ವರ್ಗಾಯಿಸಿದೆ.
ಜೂನ್ 19ರವರೆಗೆ ಮಹಿಳಾ ಜನ್‌ಧನ್ ಖಾತೆದಾರರಿಗೆ 30,952 ಕೋಟಿ ರೂ. ವರ್ಗಾಯಿಸಿದೆ. ಸುಮಾರು 2.81 ಕೋಟಿಯ ವೃದ್ಧಾಪ್ಯ, ವಿಧವೆಯರ ಮತ್ತು ದಿವ್ಯಾಂಗರಿಗೆ ಎರಡು ಕಂತುಗಳಲ್ಲಿ 2,814.5 ಕೋಟಿ ರೂ. ನೀಡಿದೆ. 2.3 ಕೋಟಿ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರಿಗೆ ಈವರೆಗೆ ಒಟ್ಟು 4,312.82 ಕೋಟಿ ರೂ. ನೀಡಲಾಗಿದೆ ಎಂದು ತಿಳಿಸಿದೆ.