ನವದೆಹಲಿ: ಕೇಂದ್ರ ಸರ್ಕಾರದ ಉದ್ಯೋಗ ಮಾಹಿತಿ ಹಂಚಿಕೆಯ ಪೋರ್ಟಲ್‌ನಲ್ಲಿ 1.09 ಕೋಟಿಗೂ ಅಧಿಕ ಉದ್ಯೋಗ ಆಕಾಂಕ್ಷಿಗಳು ನೋಂದಾಯಿಸಿದ್ದರು. ಅವರ ಮನವಿಗಳಿಗೆ ಸ್ಪಂದಿಸಿದ ಸರ್ಕಾರವು ಸುಮಾರು 67.99 ಲಕ್ಷ ಹುದ್ದೆಗಳ ಬಗ್ಗೆ ಮಾಹಿತಿ ನೀಡಿತ್ತು. ಆದರೆ, ನೋಂದಾಯಿತ ನಿರುದ್ಯೋಗಿಗಳು ಕೈಗೆತ್ತಿಕೊಂಡ ಕೆಲಸದ ಬಗ್ಗೆ ಪೋರ್ಟಲ್‌ನಲ್ಲಿ ಡೇಟಾ ಲಭ್ಯವಿಲ್ಲ ಎಂಬ ಅಂಶ ಬೆಳಕಿಗೆ ಬಂದಿದೆ.
ಲೋಕಸಭೆಯಲ್ಲಿನ ಪ್ರಶ್ನೆಗೆ ಉತ್ತರಿಸಿದ ಕಾರ್ಮಿಕ ಮತ್ತು ಉದ್ಯೋಗ ಸಚಿವ ಸಂತೋಷ್ ಗಂಗ್ವಾರ್, ರಾಷ್ಟ್ರೀಯ ವೃತ್ತಿ ಸೇವೆ (ಎನ್‌ಸಿಎಸ್) ಪೋರ್ಟಲ್ ಮೂಲಕ ಜನರು ಉದ್ಯೋಗ ಪಡೆಯುವ ದತ್ತಾಂಶವನ್ನು ನಿರ್ವಹಿಸಲಾಗುವುದಿಲ್ಲ ಎಂದು ಈ ಹಿಂದೆ ಸ್ಪಷ್ಟಪಡಿಸಿದ್ದರು. ನೋಂದಾಯಿತ ಖಾಲಿ ಹುದ್ದೆಗಳು ಮತ್ತು ನಿರುದ್ಯೋಗಿಗಳ ಡೇಟಾವನ್ನು ಮಾತ್ರ ಪೋರ್ಟಲ್ ಹೊಂದಿದೆ.
ಸೂಕ್ತ ಅಭ್ಯರ್ಥಿಗಳನ್ನು ಮತ್ತು ನಿರುದ್ಯೋಗಿಗಳನ್ನು ಹುಡುಕುತ್ತಿರುವ ಸಂಸ್ಥೆಗಳನ್ನು ಒಂದೇ ವೇದಿಕೆಯಲ್ಲಿ ತರಲು ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು ಎನ್‌ಸಿಎಸ್ ಪೋರ್ಟಲ್ ಅನ್ನು 2015ರಲ್ಲಿ ಆರಂಭಿಸಿತು. ಈ ಪೋರ್ಟಲ್‌ನಲ್ಲಿ ನಿರುದ್ಯೋಗಿಯು ಅಗತ್ಯವಿರುವ ಎಲ್ಲಾ ವಿವರಗಳೊಂದಿಗೆ ತನ್ನ ಪ್ರೊಫೈಲ್ ರಚಿಸಬಹುದು. ಹಾಗೇ ಕಂಪನಿಗಳು ಕೂಡ ಉದ್ಯೋಗಾವಕಾಶಗಳನ್ನು ಹಂಚಿಕೊಳ್ಳಲು ನೋಂದಾಯಿಸಿಕೊಳ್ಳಬಹುದು.
2015ರಿಂದ ಉದ್ಯೋಗಾಕಾಂಕ್ಷಿಗಳ ಸಂಖ್ಯೆಗೆ ಹೋಲಿಸಿದರೆ ಉದ್ಯೋಗ ಸೃಷ್ಟಿ ತೃಪ್ತಿಕರವಾಗಿಲ್ಲ. 2015-16ರಲ್ಲಿ ಈ ಪೋರ್ಟಲ್‌ನಲ್ಲಿ 1,47,780 ಉದ್ಯೋಗಗಳ ಮಾಹಿತಿ ಹಂಚಿಕೊಂಡಿದ್ದರೆ, ಉದ್ಯೋಗಾಕಾಂಕ್ಷಿಗಳು 32,32,916 ಇದ್ದರು. ಇದಕ್ಕೂ ಮೊದಲ ವರ್ಷದಲ್ಲಿ ಪೋರ್ಟಲ್‌ನಲ್ಲಿ ಕೇವಲ 559 ಕಂಪನಿಗಳು ಮಾತ್ರ ನೋಂದಣಿಯಾಗಿದ್ದವು.
2016-17ರಲ್ಲಿ ನಿರುದ್ಯೋಗಿಗಳ ನೋಂದಣಿ ಹೆಚ್ಚಾಗಿದ್ದರಿಂದ ಪೋರ್ಟಲ್ ಬಗ್ಗೆ ವ್ಯಾಪಕ ಪ್ರಚಾರ ಸಿಗುವಂತಾಯಿತು. ಆ ವರ್ಷ 14,33,075 ಖಾಲಿ ಹುದ್ದೆಗಳನ್ನು ಪೋರ್ಟಲ್‌ನಲ್ಲಿ ಹಂಚಿಕೊಳ್ಳಲಾಗಿದ್ದು, ನಿರುದ್ಯೋಗಿಗಳ ಸಂಖ್ಯೆ 44,73,989 ಆಗಿದೆ. ಅದೇ ರೀತಿ 2017-18ರಲ್ಲಿ 5,251,432 ಜನರು ಉದ್ಯೋಗ ಹುಡುಕುತ್ತಿದ್ದರೆ, ಕೇವಲ 23,54,047 ಹುದ್ದೆಗಳು ಲಭ್ಯವಿದ್ದವು.
2018-19ರಲ್ಲಿ ಕೇವಲ 40,41,848 ಉದ್ಯೋಗಗಳಿಗೆ ಹೋಲಿಸಿದರೆ ಪೋರ್ಟಲ್‌ನಲ್ಲಿ ನಿರುದ್ಯೋಗಿಗಳ ನೋಂದಣಿ ಸಂಖ್ಯೆ 85,41,273ಕ್ಕೆ ಏರಿದೆ. 2019-20ರಲ್ಲಿ ನಿರುದ್ಯೋಗಿಗಳ ಸಂಖ್ಯೆ 1,09,87,331ಕ್ಕೆ ಏರಿದರೆ, ಖಾಲಿ ಹುದ್ದೆಗಳ ಸಂಖ್ಯೆ 67,99,117 ಮಾತ್ರ ಇದ್ದವು.
ಸಕ್ರಿಯ ಉದ್ಯೋಗಾಕಾಂಕ್ಷಿಗಳ ಮಾಹಿತಿ ಮತ್ತು ಲಭ್ಯವಿರುವ ಖಾಲಿ ಹುದ್ದೆಗಳನ್ನು ನೋಡಿದಾಗ ಪರಿಸ್ಥಿತಿ ತೀರಾ ಕೆಟ್ಟದಾಗಿದೆ. ಪ್ರಸ್ತುತ 14,54,808 ಜನರು ನಿರುದ್ಯೋಗಿಗಳಾಗಿದ್ದು, ಅವರಲ್ಲಿ ಕೇವಲ 3,26,308 ಹುದ್ದೆಗಳು ಮಾತ್ರ ಪೋರ್ಟಲ್‌ನಲ್ಲಿವೆ.
45,764ಕ್ಕೆ ಲಭ್ಯವಿರುವ ಉದ್ಯೋಗಗಳ ಪಟ್ಟಿಯಲ್ಲಿ ಕರ್ನಾಟಕವು ಅಗ್ರ ಸ್ಥಾನದಲ್ಲಿದ್ದರೆ, ಮಹಾರಾಷ್ಟ್ರವು 42,506 ಉದ್ಯೋಗಗಳನ್ನು ಪಡೆದಿದೆ. ಪಶ್ಚಿಮ ಬಂಗಾಳದಲ್ಲಿ 40,417 ಉದ್ಯೋಗಗಳು ಮತ್ತು ಉತ್ತರ ಪ್ರದೇಶದಲ್ಲಿ 30,428 ಉದ್ಯೋಗಗಳು ಲಭ್ಯವಿದೆ. ಗುಜರಾತ್‌ನಲ್ಲಿ 20,081 ಉದ್ಯೋಗಗಳು ಮತ್ತು ಮಧ್ಯಪ್ರದೇಶದಲ್ಲಿ 13,739 ಉದ್ಯೋಗಗಳು ಲಭ್ಯವಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ 274 ಉದ್ಯೋಗಗಳಿವೆ ಎಂದು ಪೋರ್ಟಲ್ ಹೇಳಿದೆ.
ಪ್ರಸ್ತುತದ ಒಟ್ಟು 3 ಲಕ್ಷ ಉದ್ಯೋಗಗಳಲ್ಲಿ ಕೇವಲ 21,334 ಉದ್ಯೋಗಗಳು ಸರ್ಕಾರಿ ವಲಯದಲ್ಲಿವೆ. ನಿವೃತ್ತ ಸೈನಿಕರಿಗೆ ಕೇವಲ 23,010 ಉದ್ಯೋಗಗಳು ಮತ್ತು ಮಹಿಳೆಯರಿಗೆ ಕೇವಲ 4,986 ಉದ್ಯೋಗಗಳು ಲಭ್ಯವಿದೆ. ವಿಕಲಚೇತನರಿಗೆ 208 ಉದ್ಯೋಗಗಳು ಲಭ್ಯವಿದ್ದರೆ, ಅಪ್ರೆಂಟಿಸ್‌ಶಿಪ್‌ಗೆ ಕೇವಲ 347 ಅವಕಾಶಗಳಿವೆ.