ನವದೆಹಲಿ: ಬಡವರಿಗೆ ವಾರ್ಷಿಕ ₹ 72 ಸಾವಿರ ನೀಡುವ ಕಾಂಗ್ರೆಸ್ ಪಕ್ಷದ 'ನ್ಯಾಯ್' ಯೋಜನೆ ಅನುಷ್ಠಾನಕ್ಕೆ ಬಂದರೆ ಬಡವರ ಕೈಯಲ್ಲಿ ಹಣ ಓಡಾಡಲಿದೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.
ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿ ಮಾತನಾಡಿದ ಅವರು, ನ್ಯಾಯ್ ಯೋಜನೆ ಜಾರಿಯಿಂದ ದೇಶದ ಆರ್ಥಿಕ ಸ್ಥಿತಿ ಸುಧಾರಿಸಿ ಸರಿ ದಾರಿಯಲ್ಲಿ ಸಾಗಲಿದೆ. ಬಡವರ ಕೈಯಲ್ಲಿ ಹಣ ಓಡಾಡುತ್ತದೆ. ಇದರಿಂದ ಬೇಡಿಕೆ ಸೃಷ್ಠಿಯಾಗಿ ಉತ್ಪಾದನಾ ವಲಯವು ಚೇತರಿಸಿಕೊಳ್ಳುತ್ತದೆ. ಯುವಕರಿಗೆ ಉದ್ಯೋಗಗಳು ಸಿಗುತ್ತವೆ ಎಂದಿದ್ದಾರೆ.
ಈ ಯೋಜನೆ ಒಂದು ರೀತಿಯಲ್ಲಿ ಇಂಜಿನ್ಗೆ ಪೆಟ್ರೋಲ್ ತುಂಬಿದಂತೆ. ದೇಶದ ಆರ್ಥಿಕತೆಯನ್ನು ಪುನರ್ ಆರಂಭಿಸಲು ದೊಡ್ಡದಾದ ಕೊಡುಗೆ ನೀಡುತ್ತದೆ. ಹಳಿ ತಪ್ಪಿದ ಆರ್ಥಿಕತೆ ಸರಿದಾರಿಗೆ ಬರಲಿದ್ದು, ನಗರೀಕರಣಕ್ಕೆ ಉತ್ತೇಜನ ಸಿಗುತ್ತದೆ ಎಂದು ಭರವಸೆ ನೀಡಿದ್ದಾರೆ.
ಕಾಂಗ್ರೆಸ್ ಕಳೆದ ಆರು ತಿಂಗಳಿಂದ ದೇಶದ ಆರ್ಥಿಕ ಸ್ಥಿತಿಯನ್ನು ಸುಧಾರಿಸುವ ಕುರಿತು ಸಾಕಷ್ಟು ಸುದೀರ್ಘ ಚರ್ಚೆ ನಡೆಸಿದೆ. ಇದರ ಫಲವಾಗಿ ದೇಶದ ಕಡು ಬಡವರಿಗೆ ಅನುಕೂವಾಗುವಂತಹ ನ್ಯಾಯ್ ಯೋಜನೆ ಜಾರಿ ಮಾಡಲು ತೀರ್ಮಾನಿಸಲಾಯಿತು ಎಂದು ಯೋಜನೆ ಹಿಂದಿನ ಕಾರ್ಯ ವೈಖರಿ ತೆರೆದಿಟ್ಟರು ರಾಹುಲ್ ಗಾಂಧಿ.