ಲಂಡನ್: ಸೌದಿ ಅರೇಬಿಯಾ ಪಾಕಿಸ್ತಾನಕ್ಕೆ ಸಾಲ ಮತ್ತು ತೈಲ ಪೂರೈಕೆ ಕೊನೆಗೊಳಿಸುವುದರೊಂದಿಗೆ ಉಭಯ ದೇಶಗಳ ನಡುವಿನ ದಶಕಗಳ ಸ್ನೇಹವು ಅಂತಿಮವಾಗಿ ಕೊನೆಗೊಂಡಿದೆ ಎಂದು ಮಧ್ಯಪ್ರಾಚ್ಯ ಮಾನಿಟರ್ ವರದಿ ಮಾಡಿದೆ.
2018ರ ನವೆಂಬರ್ನಲ್ಲಿ ಸೌದಿ ಅರೇಬಿಯಾ ಘೋಷಿಸಿದ 6.2 ಬಿಲಿಯನ್ ಪ್ಯಾಕೇಜಿನ ಭಾಗವಾಗಿ ಅರೇಬಿಯಾಕ್ಕೆ 1 ಬಿಲಿಯನ್ ಡಾಲರ್ ಹಿಂದಿರುಗಿಸಲು ಪಾಕಿಸ್ತಾನಕ್ಕೆ ಸೂಚಿಸಲಾಗಿತ್ತು. ಇದರಲ್ಲಿ 3 ಬಿಲಿಯನ್ ಡಾಲರ್ ಸಾಲ ಮತ್ತು ತೈಲ ಸಾಲ ಸೌಲಭ್ಯವು 3.2 ಬಿಲಿಯನ್ ಡಾಲರ್ ಆಗಿತ್ತು.
ಕಳೆದ ವರ್ಷ ಫೆಬ್ರವರಿಯಲ್ಲಿ ಸೌದಿ ರಾಜ ಮಹಮ್ಮದ್ ಬಿನ್ ಸಲ್ಮಾನ್ ಅವರು ಪಾಕಿಸ್ತಾನಕ್ಕೆ ಭೇಟಿ ನೀಡಿದಾಗ ಈ ಒಪ್ಪಂದಗಳಿಗೆ ಸಹಿ ಹಾಕಲಾಯಿತು ಎಂದು ಮಧ್ಯಪ್ರಾಚ್ಯ ಮಾನಿಟರ್ ವರದಿ ಮಾಡಿದೆ.
ಕಾಶ್ಮೀರ ವಿಷಯದ ಬಗ್ಗೆ ಭಾರತದ ವಿರುದ್ಧ ನಿಲುವು ತೆಗೆದುಕೊಳ್ಳದ ಕಾರಣ ಪಾಕಿಸ್ತಾನ ವಿದೇಶಾಂಗ ಸಚಿವ ಶಾ ಮೆಹಮೂದ್ ಖುರೇಷಿ ಅವರು ಸೌದಿ ಅರೇಬಿಯಾ ನೇತೃತ್ವದ ಇಸ್ಲಾಮಿಕ್ ಸಹಕಾರ ಸಂಸ್ಥೆಗೆ (ಒಐಸಿ) ಸ್ಪಷ್ಟ ಎಚ್ಚರಿಕೆ ನೀಡಿದ ನಂತರ ಈ ಬೆಳವಣಿಗೆ ನಡೆದಿದೆ.
ತುಳಿತಕ್ಕೊಳಗಾದ ಕಾಶ್ಮೀರಿಗಳನ್ನು ಬೆಂಬಲಿಸಲು ನೀವು ಸಭೆ ಕರೆಯಲು ಸಾಧ್ಯವಾಗದಿದ್ದರೇ ಕಾಶ್ಮೀರದ ವಿಷಯದಲ್ಲಿ ನಮ್ಮೊಂದಿಗೆ ನಿಲ್ಲಲು ಸಿದ್ಧವಿರುವ ಇಸ್ಲಾಮಿಕ್ ರಾಷ್ಟ್ರಗಳ ಸಭೆ ಕರೆಯುವಂತೆ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಕೇಳಿಕೊಳ್ಳುತ್ತೇನೆ ಎಂದು ಖುರೇಷಿ ಹೇಳಿದ್ದರು.
ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370ನೇ ವಿಧಿಯನ್ನು ಭಾರತ ರದ್ದುಪಡಿಸಿದಾಗಿನಿಂದ ಇಸ್ಲಾಮಾಬಾದ್ ಇಸ್ಲಾಮಿಕ್ ಸಹಕಾರ ಸಂಘಟನೆಯ (ಒಐಸಿ) ವಿದೇಶಾಂಗ ಮಂತ್ರಿಗಳ ಸಭೆಗೆ ಒತ್ತಾಯಿಸುತ್ತಿದೆ.