ನವದೆಹಲಿ: ದೇಶದ ಆರ್ಥಿಕತೆ ಕುಸಿದತ್ತ ಮುಖ ಮಾಡಿರುವ ಈ ಸಂದರ್ಭದಲ್ಲಿ ಹಣಕಾಸು ಸಚಿವೆ ವಹಿಸಿಕೊಂಡಿರುವ ನಿರ್ಮಲಾ ಸೀತಾರಾಮನ್ ಎದುರು ದೊಡ್ಡ ಸವಾಲೇ ಎದುರಾಗಿದೆ.
ಈ ಸಂಬಂಧ ಕೇಳಲಾಗಿರುವ ಪ್ರಶ್ನೆಗೆ ಉತ್ತರಿಸಿರುವ ಸಚಿವರು, ನಾನು ಆರ್ಥಿಕ ಹಿಂಜರಿತ, ಜಿಡಿಪಿ ಕುಸಿತದ ಬಗ್ಗೆ ಯಾವುದೇ ಸ್ಪಷ್ಟನೆ ನೀಡುವುದಿಲ್ಲ. ಬದಲಾಗಿ ಆರ್ಥಿಕತೆ ಮೇಲೆತ್ತಲು ಏನು ಮಾಡಬೇಕೆಂಬ ಬಗ್ಗೆ ಯೋಚನೆ ಮಾಡಿ ಕಾರ್ಯಪ್ರವೃತ್ತಳಾಗುತ್ತೇನೆ ಎಂದು ಖಡಕ್ ಉತ್ತರ ಕೊಟ್ಟಿದ್ದಾರೆ.
ಇದೇ ವೇಳೆ, ಭಾರತದ ಅರ್ಥವ್ಯವಸ್ಥೆ ಕಳೆದ ಮೂರು ತಿಂಗಳಿನಿಂದ ಕುಸಿತ ಕಾಣುತ್ತಿದ್ದು, ಇದನ್ನು ತಡೆಯುವ ಸಲುವಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಈ ವಾರ ಸರಣಿ ಸಭೆಗಳನ್ನು ನಡೆಸಲಿದ್ದಾರೆ. ನಾಳೆ ಸಣ್ಣ, ಮಧ್ಯಮ ಹಾಗೂ ದೊಡ್ಡ ಪ್ರಮಾಣದ ಉದ್ಯೋಗಕ್ಕೆ ಸಂಬಂಧಿಸಿದ(MSME) ಪ್ರತಿನಿಧಿಗಳೊಂದಿಗೆ ಸಮಾಲೋಚನೆ ನಡೆಸಲಿದ್ದಾರೆ. ಈ ವಲಯದಲ್ಲಿ ಸುಮಾರು 12 ಕೋಟಿ ಉದ್ಯೋಗಿಗಳಿದ್ದು, ಅವರು ದೇಶದ ಜಿ.ಡಿ.ಪಿ.ಗೆ ಶೇಕಡಾ 20ರಷ್ಟು ಕೊಡುಗೆ ನೀಡುತ್ತಿದ್ದಾರೆ.
ಬಳಿಕ ಆಗಸ್ಟ್ 7ರಂದು ಆಟೋಮೊಬೈಲ್ ಕ್ಷೇತ್ರದ ಮುಖಂಡರೊಂದಿಗೆ ನಿರ್ಮಲಾ ಸೀತಾರಾಮನ್ ಸಭೆ ನಡೆಸಲಿದ್ದಾರೆ. ಈ ಸಭೆಯಲ್ಲಿ ಸಾರಿಗೆ ಸಚಿವ ನಿತಿನ್ ಗಡ್ಕರಿ ಕೂಡಾ ಭಾಗವಹಿಸಲಿದ್ದಾರೆ. ಮಾರಾಟದ ಇಳಿಕೆಯಿಂದಾಗಿ ಕಳೆದ ಮೂರು ತಿಂಗಳಲ್ಲಿ ಆಟೋಮೊಬೈಲ್ ಕ್ಷೇತ್ರದ 2 ಲಕ್ಷ ಕೆಲಸಗಳು ಕಳೆದು ಹೋಗಿವೆ. ಪರಿಸ್ಥಿತಿ ಸುಧಾರಿಸದಿದ್ದರೆ ಆಟೋಮೊಬೈಲ್ ವಲಯದ 10 ಲಕ್ಷದಷ್ಟು ಉದ್ಯೋಗಗಳು ಕಳೆದು ಹೋಗಲಿವೆ ಎಂದು ಭಾರತದ ಆಟೋಮೊಬೈಲ್ ತಯಾರಿಕಾ ಘಟಕವು ಎಚ್ಚರಿಕೆ ನೀಡಿದೆ.
ಆಗಸ್ಟ್ 8ರಂದು ಹಣಕಾಸು ಸಚಿವೆ ಉದ್ಯೋಗ ಕ್ಷೇತ್ರದ ಸಂಘಟನೆಗಳೊಂದಿಗೆ ಸಭೆ ನಡೆಸಲಿದ್ದಾರೆ. ಆಗಸ್ಟ್ 9ರಂದು ಹಣಕಾಸು ಮಾರುಕಟ್ಟೆಯ ಬಾಂಬೆ ಸ್ಟಾಕ್ ಎಕ್ಸ್ಚೇಂಜ್(BSE), ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್(NSE) ಹಾಗೂ ಮ್ಯೂಚುವಲ್ ಫಂಡ್ ಹೌಸ್ಗಳ ಮುಖಂಡರು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಇದಾದ ಬಳಿಕ ಆಗಸ್ಟ್ 11ರಂದು ರಿಯಲ್ ಎಸ್ಟೇಟ್ ಉದ್ಯೋಗ ಹಾಗೂ ಮನೆ ಖರೀದಿದಾರರ ಪ್ರತಿನಿಧಿಗಳೊಂದಿಗೆ ಸಭೆ ನಡೆಸಲಿದ್ದಾರೆ. ಈ ಎಲ್ಲಾ ಸಭೆಗಳಲ್ಲಿ ಸಂಬಂಧಿಸಿದ ವಲಯದ ಸಚಿವರು ಕೂಡಾ ಭಾಗವಹಿಸಲಿದ್ದಾರೆ.