ನವದೆಹಲಿ: ಶಿಕ್ಷಕರ ತರಬೇತಿಗಾಗಿ ಹೊಸ ರೂಪದ ಸಮಗ್ರ ಬಿಇಡಿ ಕೋರ್ಸ್ ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಆರಂಭಿಸುವುದಾಗಿ ಹೇಳಿದ ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ಈಗಿನ 2 ವರ್ಷಗಳ ಅವಧಿಯನ್ನು ಪದವಿಯೊಂದಿಗೆ ವಿಸ್ತರಿಸಿದೆ.
ರಾಜ್ಯಸಭೆಯಲ್ಲಿ ಈ ಬಗ್ಗೆ ಮಾಹಿತಿ ನೀಡಿ ಎಚ್ಆರ್ಡಿ ಸಚಿವ ರಮೇಶ್ ಪೋಖ್ರಿಯಾಲ್, ಪ್ರಸಕ್ತ 2 ವರ್ಷದ ಬಿಇಡಿ ಕೋರ್ಸ್ ಬದಲಿಗೆ 4 ವರ್ಷದ ಸಮಗ್ರ ಬಿಎ - ಬಿಇಡಿ, ಬಿಎಸ್ಸಿ- ಬಿಇಡಿ ಮತ್ತು ಬಿಕಾಂ- ಬಿಇಡಿ ಕೋರ್ಸ್ಗಳ ಆರಂಭವಾಗಲಿವೆ. ಸಮಗ್ರ ಬಿಇಡಿ ಕೋರ್ಸ್ ಆರಂಭಕ್ಕೆ ಸಿದ್ಧತೆ ನಡೆಸುವಂತೆ ಈಗಾಗಲೇ ಸೂಚನೆ ಹೊರಡಿಸಲಾಗಿದೆ. ನೂತನ ಕೋರ್ಸ್ಗೆ ಅಗತ್ಯವಿರುವ ಪಠ್ಯ ಸಿದ್ಧಗೊಂಡಿದ್ದು, ಎಲ್ಲ ಶಿಕ್ಷಣ ಸಂಸ್ಥೆಗಳಿಗೂ ಮತ್ತು ವಿಶ್ವವಿದ್ಯಾನಿಲಯಗಳಿಗೆ ಮಾಹಿತಿ ಕಳುಹಿಸಲಾಗಿದೆ ಎಂದು ವಿವರಿಸಿದರು.
ಶಿಕ್ಷಣ ಹಕ್ಕು ಕಾಯಿದೆ ಪ್ರಕಾರ, ಎಲ್ಲ ಶಿಕ್ಷಕರಿಗೆ ಬಿಇಡಿ ತರಬೇತಿ ಕಡ್ಡಾಯವಾಗಿದೆ. ತರಬೇತಿ ಪಡೆಯದೇ ಉಳಿದ ಶಿಕ್ಷಕರು 2019ರ ಅಕ್ಟೋಬರ್ 31ರ ಒಳಗೆ ತರಬೇತಿಗೆ ನೋಂದಣಿ ಮಾಡಿಕೊಳ್ಳಬೇಕು ಎಂದು ತಿಳಿಸಿದ್ದಾರೆ.
ಪರಿಷ್ಕೃತ ನೂತನ ಸಮಗ್ರ ಕೋರ್ಸ್ನಿಂದ ವಿದ್ಯಾರ್ಥಿಗಳಿಗೆ ಒಂದು ವರ್ಷ ಉಳಿತಾಯದ ಜೊತೆಗೆ ಉತ್ತಮ ತರಬೇತಿ ಕೂಡ ಸಿಗಲಿದೆ. 2015ರವರೆಗೆ 7 ಲಕ್ಷ ಶಿಕ್ಷಕರಿಗೆ ತರಬೇತಿ ನೀಡಲಾಗಿದೆ. ಆದರೆ, ಅವರಲ್ಲಿ ಹೆಚ್ಚಿನವರು ತರಬೇತಿರಹಿತರಾಗಿದ್ದಾರೆ. ಎಲ್ಲ ಶಿಕ್ಷಕರು ತರಬೇತಿ ಹೊಂದಿರಬೇಕು ಮತ್ತು ಆರ್‌ಟಿಇ ಕಾಯ್ದೆಯ ಪ್ರಕಾರ ಇದು ಕಡ್ಡಾಯವಾಗಿದೆ ಎಂದು ಸಚಿವರು ಹೇಳಿದರು.
ಶಿಕ್ಷಕರ ತರಬೇತಿಗಾಗಿ 19,542 ಶಿಕ್ಷಕ ತರಬೇತಿ ಸಂಸ್ಥೆಗಳಿದ್ದು, 25,876 ಕೋರ್ಸ್‌ಗಳು ಒಳಗೊಂಡಿದೆ. ಪ್ರಸ್ತುತ 15 ಲಕ್ಷ ವಿದ್ಯಾರ್ಥಿಗಳಿಗೆ ತರಬೇತಿ ಪಡೆಯುತ್ತಿದ್ದಾರೆ ಎಂದು ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.