ನವದೆಹಲಿ: ಏಪ್ರಿಲ್-ಆಗಸ್ಟ್ ಅವಧಿಯಲ್ಲಿ ನಿವ್ವಳ ನೇರ ತೆರಿಗೆ ಸಂಗ್ರಹವು 1.92 ಲಕ್ಷ ಕೋಟಿ ರೂ. ಆಗಿದ್ದು, ಕಳೆದ ಹಣಕಾಸು ವರ್ಷದ ಇದೇ ಅವಧಿಗಿಂದ ಶೇ 31ರಷ್ಟು ಕಡಿಮೆಯಾಗಿದೆ.
ಆಗಸ್ಟ್ವರೆಗಿನ ಐದು ತಿಂಗಳ ಅವಧಿಯಲ್ಲಿ ನಿವ್ವಳ ಪರೋಕ್ಷ ತೆರಿಗೆ ಸಂಗ್ರಹವು ವರ್ಷದಿಂದ ವರ್ಷಕ್ಕೆ ಶೇ 11ರಷ್ಟು ಇಳಿದು 3.42 ಲಕ್ಷ ಕೋಟಿ ರೂ.ಗೆ ತಲುಪಿದೆ.
ಲೋಕಸಭೆಗೆ ಲಿಖಿತ ಉತ್ತರದಲ್ಲಿ ಹಣಕಾಸು ಸಚಿವ ಅನುರಾಗ್ ಸಿಂಗ್ ಠಾಕೂರ್ ಅವರು ಮಾಹಿತಿ ನೀಡಿದ್ದು, 2019ರ ಏಪ್ರಿಲ್-ಆಗಸ್ಟ್ ತಿಂಗಳಲ್ಲಿ ನಿವ್ವಳ ನೇರ ತೆರಿಗೆ ಸಂಗ್ರಹವು 2,79,711 ಕೋಟಿ ರೂ.ಗಳಾಗಿತ್ತು. 2020ರ ಏಪ್ರಿಲ್-ಆಗಸ್ಟ್ನಲ್ಲಿ 1,92,718 ಕೋಟಿ ರೂ.ಯಷ್ಟಿದೆ ಎಂದು ಹೇಳಿದ್ದಾರೆ.
ಏಪ್ರಿಲ್-ಆಗಸ್ಟ್ 2019ರಲ್ಲಿ ನಿವ್ವಳ ಪರೋಕ್ಷ ತೆರಿಗೆ ಸಂಗ್ರಹವು 3,85,949 ಕೋಟಿ ರೂ. ಆಗಿದ್ದರೆ, 2020ರ ಅದೇ ಅವಧಿಯಲ್ಲಿ 3,42,591 ಕೋಟಿ ರೂ.ಯಷ್ಟಿದೆ. ಏಪ್ರಿಲ್-ಆಗಸ್ಟ್ ಅವಧಿಯಲ್ಲಿ ಕೇಂದ್ರದ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಸಂಗ್ರಹವು 1.81 ಲಕ್ಷ ಕೋಟಿ ರೂ.ಯಷ್ಟಿದೆ. ಕೇಂದ್ರ ಬಜೆಟ್ ಜಿಎಸ್‌ಟಿ ಸಂಗ್ರಹವನ್ನು ಪೂರ್ಣ ಹಣಕಾಸು ವೇಳೆಗೆ 6,90,500 ಕೋಟಿ ರೂ.ಯಷ್ಟು ಅಂದಾಜಿಸಿತ್ತು.
2019-20ರಲ್ಲಿ ಕೇಂದ್ರದ ನಿವ್ವಳ ಜಿಎಸ್‌ಟಿ ಆದಾಯವು 5,98,825 ಕೋಟಿ ರೂ.ಗಳಾಗಿದ್ದು, ಪರಿಷ್ಕೃತ ಅಂದಾಜು 6,12,327 ಕೋಟಿ ರೂ.ಯಷ್ಟಿದೆ.