ನವದೆಹಲಿ: ಅಬುಧಾಬಿಯಲ್ಲಿ 6ನೇ ಸಿಇಒಗಳ ದುಂಡು ಮೇಜಿನ ಸಭೆ ನಡೆಯಲಿದ್ದು, ಕೋವಿಡ್-19 ನಂತರದ ತೈಲ, ಗ್ಯಾಸ್ ಮತ್ತು ಪೆಟ್ರೋಕೆಮಿಕಲ್ ಉದ್ಯಮ ಚೇತರಿಕೆಯ ಬಗ್ಗೆ ಚರ್ಚಿಸಲು 30ಕ್ಕೂ ಅಧಿಕ ಜಾಗತಿಕ ನಾಯಕರು ಭಾಗವಹಿಸಲಿದ್ದಾರೆ.
ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಖೇಶ್ ಅಂಬಾನಿ ಮತ್ತು ಇಂಡಿಯನ್ ಆಯಿಲ್ ಕಾರ್ಪೋರೇಷನ್ (ಐಒಸಿ) ಅಧ್ಯಕ್ಷ ಶ್ರೀಕಾಂತ್ ಮಾಧವ್ ವೈದ್ಯ ಅವರು 30ಕ್ಕೂ ಅಧಿಕ ವಿಶ್ವ ನಾಯಕರೊಂದಿಗೆ ಪಾಲ್ಗೊಳ್ಳಲಿದ್ದಾರೆ.
ಕೋವಿಡ್-19 ಬಳಿಕ ತೈಲ ಮತ್ತು ಅನಿಲ ಕಂಪನಿಗಳು ಹೇಗೆ ಸ್ಥಿರತೆಯನ್ನು ಸ್ಥಾಪಿಸತ್ತವೆ. ಇಂಧನ ಸ್ಥಿತ್ಯಂತರದಲ್ಲಿ ಉದ್ಯಮದ ಪಾತ್ರ ಸೇರಿದಂತೆ ಜಾಗತಿಕ ಉದ್ಯಮ ಎದುರಿಸುತ್ತಿರುವ ವಿಷಯಗಳ ಬಗ್ಗೆ ವಿಶ್ವ ನಾಯಕರು ನವೆಂಬರ್ 11ರಂದು ಚರ್ಚಿಸಲಿದ್ದಾರೆ ಎಂದು ಸಮಾವೇಶದ ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ದುಂಡು ಮೇಜಿನ ಸಮ್ಮೇಳನ ಜಾಗತಿಕ ಮಟ್ಟದ ಉನ್ನತ ವಿಷಯಗಳ ಚರ್ಚೆಗೆ ವೇದಿಕೆಯಾಗಲಿದೆ. ಇದು ಇಂಧನ ಮಾರುಕಟ್ಟೆ ಮತ್ತು ಕೋವಿಡ್-19 ನಂತರದ ಆರ್ಥಿಕ ಚೇತರಿಕೆಯ ದೃಷ್ಟಿಕೋನ ಒಳಗೊಂಡಿರುತ್ತದೆ.
ವಿಶ್ವದ ಪ್ರಮುಖ ತೈಲ, ಅನಿಲ ಮತ್ತು ಪೆಟ್ರೋಕೆಮಿಕಲ್ ಕಂಪನಿಗಳನ್ನು ಪ್ರತಿನಿಧಿಸುವ ಹಿರಿಯ ಅಧಿಕಾರಿಗಳನ್ನು ಯುಎಇ ಕೈಗಾರಿಕಾ ಮತ್ತು ಸುಧಾರಿತ ತಂತ್ರಜ್ಞಾನ ಸಚಿವ ಹಾಗೂ ಎಡಿಎನ್‌ಒಸಿ ಗ್ರೂಪ್ ಸಿಇಒ ಸುಲ್ತಾನ್ ಅಹ್ಮದ್ ಅಲ್ ಜಾಬರ್ ಆಹ್ವಾನಿಸಿದ್ದಾರೆ.
ಅಂಬಾನಿ ಮತ್ತು ವೈದ್ಯರಲ್ಲದೆ, ಟೋಟಲ್ನ ಸಿಇಒ ಪ್ಯಾಟ್ರಿಕ್ ಪೌಯೆನೆ, ಎಕ್ಸಾನ್ಮೊಬಿಲ್ ಅಧ್ಯಕ್ಷ ಮತ್ತು ಸಿಇಒ ಡ್ಯಾರೆನ್ ವುಡ್ಸ್, ಬಿಪಿ ಸಿಇಒ ಬರ್ನಾರ್ಡ್ ಲೂನಿ, ಎನಿ ಸಿಇಒ ಕ್ಲಾಡಿಯೊ ಡೆಸ್ಕಾಲಿಜ್, ಇನ್ಪೆಕ್ಸ್ನ ಅಧ್ಯಕ್ಷ ಮತ್ತು ಸಿಇಒ ಟಕಾಯುಕಿ ಉಡಾ, ಚೀನಾ ನ್ಯಾಷನಲ್ ಪೆಟ್ರೋಲಿಯಂ ಕಾರ್ಪೊರೇಷನ್‌ನ (ಸಿಎನ್‌ಪಿಸಿ) ಅಧ್ಯಕ್ಷ ಡೈ ಹೌಲಿಯಾಂಗ್ ಸೇರಿದಂತೆ ಇತರೆ ಉದ್ಯಮ ದಿಗ್ಗಜರು ಭಾಗವಹಿಸುವರು.