ನವದೆಹಲಿ: ಕೊರೊನಾ ಹಬ್ಬುವುದನ್ನು ತಡೆಯಲು ವಿಧಿಸಿದ್ದ ಲಾಕ್ಡೌನ್ ದೇಶದ ಎಲ್ಲ ವಲಯಗಳನ್ನು ಕಾಡಿತ್ತು. ಇದಕ್ಕೆ ಕೃಷಿ ಸಹ ಹೊರತಾಗಿರಲಿಲ್ಲ. ಇಂತಹ ಬಿಕ್ಕಟ್ಟಿನ ಸಂದರ್ಭದಲ್ಲಿ ಕೇಂದ್ರ ಸರ್ಕಾರವು ಮುಂಗಾರು ಹಂಗಾಮಿನ ಕೃಷಿ ಉತ್ಪನ್ನಗಳ ಕನಿಷ್ಠ ಬೆಂಬಲ ಬೆಲೆಯನ್ನು ಗಣನೀಯವಾಗಿ ಹೆಚ್ಚಿಸುವ ಮೂಲಕ ಕೃಷಿಕರ ಆದಾಯ ಹೆಚ್ಚಿಸುವ ನಿಟ್ಟಿನಲ್ಲಿ ರಚನಾತ್ಮಕ ಹೆಜ್ಜೆ ಇರಿಸಿದೆ.
2020-21ರ ಬೆಳೆ ವರ್ಷಕ್ಕೆ ಭತ್ತದ ಎಂಎಸ್‌ಪಿಯನ್ನು ಪ್ರತಿ ಕ್ವಿಂಟಲ್‌ಗೆ 53 ರೂ.ನಿಂದ 1,868 ರೂ.ಗೆ ಏರಿಸಲಾಗಿದೆ ಎಂದು ಕೇಂದ್ರ ಸಚಿವ ನರೇಂದ್ರ ತೋಮರ್ ಅವರು ಸಚಿವ ಸಂಪುಟದ ಬಳಿಕ ಮಾಧ್ಯಮಗಳಿಗೆ ತಿಳಿಸಿದರು.
ಜೋಳದ ಮೇಲಿನ ಎಂಎಸ್‌ಪಿಯು ಕ್ವಿಂಟಲ್‌ಗೆ 2,620 ರೂ., ಸಜ್ಜೆ ಕ್ವಿಂಟಲ್‌ಗೆ 2,150 ರೂ.ಗೆ ಏರಿಸಲಾಗಿದೆ. ಇತರ ಉತ್ಪನ್ನಗಳ ಪೈಕಿ ಹತ್ತಿಯ ಎಂಎಸ್‌ಪಿಯನ್ನು ಶೇ 50ರಷ್ಟು ಅಥವಾ 260 ರೂ.ಗಳಿಂದ ಕ್ವಿಂಟಲ್‌ಗೆ 5,515 ರೂ.ಗೆ ಏರಿಕೆಯಾಗಿದೆ. ರಾಗಿ, ಮೂಂಗ್ ದಾಲ್ ಮತ್ತು ನೆಲಗಡಲೆಯ ಎಂಎಸ್‌ಪಿಯನ್ನು ಸಹ 50 ಪ್ರತಿಶತದಷ್ಟು ಹೆಚ್ಚಿಸಲಾಗಿದೆ ಎಂದು ಸಚಿವರು ಹೇಳಿದ್ದಾ್ರೆ.